ಬಸ್ಸಿನಲ್ಲಿ ಟಚಿಂಗ್ ಟಚಿಂಗ್… ಇನ್ಸ್ಟಾಗ್ರಾಮ್’ನಲ್ಲಿ ಫೋಟೋ ಹಾಕಿ ವೈರಲ್ ಮಾಡಿದ ಯುವತಿ!
ಮಂಗಳೂರು: ಎಷ್ಟೋ ಬಾರಿ ಯುವತಿಯರು, ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕನಿಂದ ಕಿರುಕುಳಕ್ಕೆ ಒಳಗಾದಗ ಯಾವುದೋ ಅಂಜಿಕೆ ಯಿಂದ ಆ ಬಗ್ಗೆ ಇತರರಲ್ಲಿ ಹೇಳದೇ ಯಾತನೆ ಅನುಭವಿಸುತ್ತಾರೆ. ಆದರೆ ಈ ಇಲ್ಲೊಬ್ಬ ಯುವತಿ ಮಾತ್ರ ಧೈರ್ಯದಿಂದ ಬಸ್ಸಿನಲ್ಲಿ ತನಗಾದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಯುವತಿ ಕೆ.ಎಸ್.ಹೆಗ್ಡೆಯಿಂದ ಖಾಸಗಿ ಬಸ್ನಲ್ಲಿ ಪಂಪ್ವೆಲ್ಗೆ ಜ.14 ಹೋಗುತ್ತಿದ್ದರು. ಈ ಸಂದರ್ಭ ಸಹ ಪ್ರಯಾಣಿಕ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಆ ಪೋಸ್ಟ್ ವೈರಲ್ ಆಗಿದೆ.
ಜ.14 ರಂದು ಯುವತಿ ಕೆ.ಎಸ್.ಹೆಗ್ಡೆಯಿಂದ ಪಂಪ್ವೆಲ್ಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಚಿತ್ರದಲ್ಲಿರುವ ವ್ಯಕ್ತಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನಿಲ್ದಾಣದಿಂದ ಬಸ್ಗೆ ಹತ್ತಿದ್ದು, ಯುವತಿಯ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಈ ವೇಳೆ ಆತ ಫೋನ್ನಲ್ಲಿ ಮಾತನಾಡುವುದರಲ್ಲಿ ನಿರತರಾಗಿರುವಂತೆ ವರ್ತಿಸುತ್ತಿದ್ದನು. ಆದರೆ, ಆತ ಇನ್ನೊಂದು ಕೈಯಲ್ಲಿ ಯುವತಿಯನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ.
ಇದರಿಂದ ಯುವತಿ ಸರಿದು ಕುಳಿತಳಾದರೂ ಆತ ಯುವತಿಯನ್ನು ಸ್ಪರ್ಶಿಸುತ್ತಲೇ ಇದ್ದ. ಈ ವೇಳೆ ಯುವತಿ ಕೂಗಿಕೊಂಡಾಗ ಸ್ವಲ್ಪ ಸಮಯದ ಬಳಿಕ ಅವನು ಯುವತಿಯ ಬಳಿ ಕ್ಷಮೆ ಕೇಳಿ ಹಿಂಬದಿಯ ಸೀಟ್ನಲ್ಲಿ ಕುಳಿತುಕೊಂಡ. ಸ್ವಲ್ಪ ಸಮಯದ ಬಳಿಕ ಮತ್ತೆ ಯುವತಿಯ ಬಳಿ ಬಂದು ಕುಳಿತುಕೊಂಡ. ಅಲ್ಲದೇ, ಮತ್ತದೇ ಚಾಳಿಯನ್ನು ಮುಂದುವರೆಸಿದ್ದಾನೆ. ಈ ವೇಳೆ ಯುವತಿ ಆತನಲ್ಲಿ ಪುರುಷರ ಸೀಟ್ನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ. ಆದರೆ, ಆತ ಮಾತನ್ನು ನಿರಾಕರಿಸಿ ಪುನಃ ಸ್ಪರ್ಶಿಸಲು ಆರಂಭಿಸಿದ್ದಾನೆ. ನಿಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ. ಇದರಿಂದ ಈ ರೀತಿಯಾದ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆತ ಮಾಸ್ಕ್ ತೆಗೆದು ಫೋಟೋಗೆ ಪೋಸ್ ನೀಡಿ ಧನ್ಯವಾದಗಳು ಎಂದು ಹೇಳಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಉಳಿದ ಪ್ರಯಾಣಿಕರು, ನಿರ್ವಾಹಕ, ಚಾಲಕ ಯುವತಿಯನ್ನು ನೋಡುತ್ತಿದ್ದಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದರೊಂದಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಪೋಸ್ಟ್ ಮಾಡಿದ್ದೇನೆ. ಸಾಮಾನ್ಯವಾಗಿ ಕೆಲಸ, ಕಾಲೇಜಿಗೆ ಹೋಗುವ ಸಂದರ್ಭ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಈ ರೀತಿಯಾಗಿರಬಹುದು. ಆದರೆ, ಇದು ಇದೇ ಮೊದಲ ಬಾರಿ ಅಲ್ಲ. ದುರಾದೃಷ್ಟವಶಾತ್, ಶೇ.99ರಷ್ಟು ಮಹಿಳೆಯರಿಗೆ ಈ ರೀತಿಯಾದ ಅನುಭವಿದ್ದರೂ ಕೂಡಾ ತಮ್ಮ ಘನತೆ ಹಾಗೂ ಭವಿಷ್ಯಕ್ಕೆ ಹೆದರಿ ಈ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾವುದೇ ಕಾನೂನು, ಪೊಲೀಸರು, ಯಾರೇ ಆದರೂ ಕೂಡಾ ಬಂದು ನಿಮಗೆ ಸಹಾಯ ಮಾಡುವುದಿಲ್ಲ. ಬದಲಾಗಿ ರಿಯಾಲಿಟಿ ಶೋ ನೋಡುವ ರೀತಿ ನಿಂತು ನೋಡುತ್ತಿರುತ್ತಾರೆ. ಈ ಪೋಸ್ಟ್ ಅನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್ ಅನ್ನು ಶೇರ್ ಮಾಡಿ. ಇದರಿಂದ ಈ ರೀತಿಯಾದಲ್ಲಿ ಮಹಿಳೆಯು ಅಥವಾ ಹುಡುಗಿಯರು ಮೌನವಾಗಿರುವ ಬದಲು ಧ್ವನಿ ಎತ್ತುತ್ತಾರೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.