ಉಡುಪಿ: ಅವಿರೋಧ ಆಯ್ಕೆಯಾಗಿದ್ದ ಬಿಜೆಪಿ ಸದಸ್ಯೆ ಕಾಂಗ್ರೆಸ್ ಸೇರ್ಪಡೆ
ಉಡುಪಿ: ಕಳೆದ ಎರಡು ಬಾರಿ ಕಡೆಕಾರು ಗ್ರಾಮ ಪಂಚಾಯತ್ ನ ಸದಸ್ಯರಾಗಿ ಸೇವೆ ಸಲ್ಲಿಸಿ, ಈಗ ಮೂರನೇ ಬಾರಿ ಅವಿರೋಧವಾಗಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವೀಣಾ ಪ್ರಕಾಶ್ ಇಂದು ಉಡುಪಿ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಜಿಲ್ಲಾ ಮತ್ತು ಉಡುಪಿ ಬ್ಲಾಕ್ ಮಟ್ಟದ ನಾಯಕರುಗಳ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ್ರತವಾಗಿ ಸೇರ್ಪಡೆಗೊಂಡರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ವೀಣಾ ಪ್ರಕಾಶ್ ಮತ್ತು ಅವರ ಪತಿ ಪ್ರಕಾಶ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿದರು.
ಒಟ್ಟು 21 ಸದಸ್ಯರ ಕಡೆಕಾರು ಪಂಚಾಯತ್ ನಲ್ಲಿ ಈಗಾಗಲೇ ಬಹುಮತ ಪಡೆದಿರುವ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 7 ಬಿಜೆಪಿ ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿಯೇ ಬಿಜೆಪಿ ಹಿನ್ನಡೆ ಅನುಭವಿಸಿದೆ.
ಕಳೆದ ಎರಡು ಬಾರಿ ಕುತ್ಪಾಡಿ 11ನೇ ವಾರ್ಡಿನಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದ ವೀಣಾ ಪ್ರಕಾಶ್ ರವರು, ತಮ್ಮ ಹತ್ತು ವರ್ಷಗಳ ಸದಸ್ಯತನದ ಅವಧಿಯಲ್ಲಿ ಪ್ರಾಮಾಣಿಕ ಸದಸ್ಯರೆಂಬ ಹೆಗ್ಗಳಿಕೆಯನ್ನು ಪಡೆದು ತನ್ನ ಕ್ಷೇತ್ರದ ಸರ್ವಾಂಗೀಣ ಅಬಿವೃದ್ಧಿ ಗೆ ತನ್ನ ಅಪಾರ ಕೊಡುಗೆಯನ್ನು ನೀಡಿದ್ದು ಮಾತ್ರವಲ್ಲದೆ ತನ್ನ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ತನ್ನ ಕ್ಷೇತ್ರದ ಎಲ್ಲಾ ನಾಗರಿಕರ ಮನಗೆದ್ದಿದ್ದರು. ಈ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿ ಭಾರೀ ಸುದ್ದಿಯಾಗಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್, ಜಿಲ್ಲಾ ಕಾಂಗ್ರೆಸ್ ನ ಪ್ರಮುಖರಾದ ಪ್ರಖ್ಯಾತ್ ಶೆಟ್ಟಿ, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.