ಉಡುಪಿ: ಅಂಗಡಿ, ಮುಂಗಟ್ಟು ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಬಳಕೆಗೆ ಆದ್ಯತೆ ನೀಡಿ
ಉಡುಪಿ: ಅಂಗಡಿ, ಮುಂಗಟ್ಟು ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಉಡುಪಿಯಲ್ಲಿ ಇಂದು ಈ ಬಗ್ಗೆ ನಡೆದ ಪತ್ರಿಕಾ ಗೋಷ್ಟಿ ಕರವೇ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ ಮಾತನಾಡಿ, ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ.
ಆದ್ದರಿಂದ ಕನ್ನಡ ಬಳಕೆ, ಅಸ್ತಿತ್ವಕ್ಕಾಗಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ. ವೇದಿಕೆಗೆ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಕನ್ನಡ/ರಾಜ್ಯಕ್ಕೆ ಆಗುವ ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತೇವೆ ಎಂದರು. ಇದೇ ವೇಳೆ ಮಾತು ಮುಂದುವರೆಸಿದ ಅವರು, ಜಿಲ್ಲೆಯಲ್ಲಿ ಹಿಂದಿ ಹಾವಳಿ ಹೆಚ್ಚಾಗುತ್ತಿದ್ದು, ಕನ್ನಡಿಗರಿಗೆ ಸಮಸ್ಯೆಯಾಗುತ್ತಿದೆ.
ಜಿಲ್ಲೆಯ ನಗರಸಭಾ ವ್ಯಾಪ್ತಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ-ಮುಂಗ್ಗಟ್ಟು, ಹೋಟೆಲ್ಗಳು, ಕಂಪನಿಗಳು ಸಹಿತ ಎಲ್ಲಾ ಸ್ಥಳಗಳಲ್ಲೂ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂದು ಅವರು ಆಗ್ರಹಿಸಿದರು.
ಇದೇ ವೇಳೆ ಉಡುಪಿ ಜಿಲ್ಲೆಯ ಸರಕಾರಿ ಕಚೇರಿಯಲ್ಲಿ ಖಾಲಿ ಇರುವ ಖಾಯಂ ಹಾಗೂ ಗುತ್ತಿಗೆ ಆಧಾರಿತ ಉದ್ಯೋಗವನ್ನು ಜಿಲ್ಲೆಯ ಬಡ ವಿದ್ಯಾವಂತ ನಿರುದ್ಯೋಗಿ ಸ್ಥಳೀಯ ಅರ್ಹ ಯುವಕ, ಯುವತಿಯರಿಗೆ ಅವಕಾಶ ಕೊಡಬೇಕು ಎಂದು ಹೇಳಿದರು. ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಡಾ. ನೇರಿ ಕರ್ನೇಲಿಯೋ, ಉಪಾಧ್ಯಕ್ಷ ಜಯರಾಮ್ ಪೂಜಾರಿ, ಮೊಹಮ್ಮದ್ ಹ್ಯಾರಿಸ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋಶನ್ ಮೊದಲಾದವರು ಉಪಸ್ಥಿತರಿದ್ದರು.