ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು: ಐಕಳ ಹರೀಶ್ ಶೆಟ್ಟಿ
ಮಂಗಳೂರು : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು ಇತ್ಯಾದಿ ಸಹಾಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ನೀಡುತ್ತಾ ಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ನಗರದ ಬಂಟ್ಸ್ ಹಾಸ್ಟೆಲ್ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ನಡೆದ 2021ರ ಸಾಲಿನಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಕಳೆದ ತಿಂಗಳು ಅವಳಿ ಜಿಲ್ಲೆಯಲ್ಲಿ 1.50 ಕೋಟಿ ರೂಪಾಯಿಗೂ ಮಿಕ್ಕಿದ ಆರ್ಥಿಕ ಸಹಾಯವನ್ನು ಬಂಟ ಸಮಾಜದವರ ಜೊತೆ ಎಲ್ಲಾ ಸಮಾಜದ ದುರ್ಬಲರು, ಅಶಕ್ತರಿಗೆ ನೆರವು ಒದಗಿಸಲಾಗಿತ್ತು ಎಂದರು.
ಬಂಟ ಸಮಾಜದಲ್ಲಿರುವ ಬಡವರನ್ನು ಮುಳಿ ಹುಲ್ಲಿನ ಮನೆಯಿಂದ ಮುಕ್ತಿಗೊಳಿಸುವುದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಓದಲು ಅಸಕ್ತರಾಗಿರುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದಲೇ ಮೂವರು ವಿದ್ಯಾರ್ಥಿಗಳನ್ನು ಒಕ್ಕೂಟ ದತ್ತು ತೆಗೆದು ಕೊಂಡಿದೆ. ಕೆಂಜಾರು ಬಳಿ ಗುಡಿಸಲಲ್ಲಿ ವಾಸಿಸುವ ಮಹಿಳೆಗೆ ಮನೆ ಕಟ್ಟಿಕೊಡಲಾಗುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ 19 ಜನರಿಗೆ ಮನೆ ರಿಪೇರಿ ಮತ್ತು ಮನೆ ಕಟ್ಟಲು ನೆರವು, 30 ಮಂದಿಗೆ ವೈದ್ಯಕೀಯಕ್ಕೆ, 16 ಮಂದಿ ಹೆಣ್ಣು ಮಕ್ಕಳಿಗೆ ಮದುವೆಗೆ, 30 ಮಂದಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಾಜೀ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸುದರ್ಶನ್ ಶೆಟ್ಟಿ ಪೆರ್ಮಂಕಿ, ಜಗನ್ನಾಥ್ ಶೆಟ್ಟಿ ಬಾಳ, ಜೀವನ್ ಶೆಟ್ಟಿ ಮುಲ್ಕಿ, ಮೋಹನ್ ಶೆಟ್ಟಿ ಉಡುಪಿ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಶೆಟ್ಟಿ ಕೊಳ್ಕೆಬೈಲ್ ಮೊದಲಾದವರು ಉಪಸ್ಥಿತರಿದ್ದರು. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಸತೀಶ್ ಅಡಪ ಸಂಕಬೈಲ್ ವಂದಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ.ಕ ಮಂಗಳೂರು ಸಹಯೋಗದಲ್ಲಿ ಸುಮಾರು 1 ತಿಂಗಳ ಹಿಂದೆ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 1.50ಕೋಟಿ ಸಹಾಯಧನವನ್ನುಶಿಕ್ಷಣ,ವೈಧ್ಯಕೀಯ, ಗೃಹ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯಧನ ವಿತರಿಸಿದ್ದು ಆ ಸಂದರ್ಭದಲ್ಲಿ ಪ್ರಯೋಜನ ಪಡಕೊಳ್ಳದ ಫಲಾನುಭವಿಗಳಿಗೆ ಸಮಾಜ ಕಲ್ಯಾಣ ನಿಧಿ ವಿತರಣಾ ಸಮಾರಂಭವು ಜ.16ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸಂಜೆ 3.30ಕ್ಕೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ ವೈದ್ಯಕೀಯ ನೆರವಿಗಾಗಿ ಸುಮಾರು 1.40ಲಕ್ಷ ರೂಪಾಯಿ ,ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ, ಎಸ್.ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ೫೪ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ , ಗೃಹ ನಿರ್ಮಾಣಕ್ಕೆ 11 ಮಂದಿಗೆ 22 ಲಕ್ಷ , ಮತ್ತು ವಸತಿ ರಿಪೇರಿಗೆ ಸುಮಾರು 3ಲಕ್ಷ ರೂಪಾಯಿ ಮುಂತಾದ ಅವಶ್ಯಕತೆಗಳಿಗೆ ಸಹಾಯ ಧನ ವಿತರಿಸಲಾಗುವುದು.
ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ, ಉಡುಪಿ ಬಂಟರ ಸಂಘದ ಅದ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಇಂದ್ರಾಳಿ ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.