ಉಪ್ಪುಂದ: ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದಕ್ಕೆ ಸ್ಥಳೀಯರ ಪ್ರತಿಭಟನೆ
ಕುಂದಾಪುರ: ಕೋವಿಡ್-19 ತಪಾಸಣೆಯಲ್ಲಿ ಸೋಂಕು ದೃಢ ಪಟ್ಟಿದೆ ಎಂದು ಹೇಳಿ, ಮನೆಗಳನ್ನು ಸೀಲ್‌ಡೌನ್ ಮಾಡಿ ನಾಲ್ಕು ದಿನ ಕಳೆದರೂ ಅಂಥವರನ್ನು ಆಸ್ಪತ್ರೆಗೆ ಸಾಗಿಸದ ಆರೋಗ್ಯ ಇಲಾಖೆ ವಿರುದ್ಧ ಪ್ರತಿಭಟಿನೆ ನಡೆಸಿದ ಘಟನೆ ಮರವಂತೆಯಲ್ಲಿ ನಡೆದಿದೆ.
ಮುಂಬಯಿಯಿಂದ ಬಂದಿದ್ದ ಇಬ್ಬರು ಮಹಿಳೆಯರು ಮತ್ತು ಆರು ಮಂದಿ ಪುರುಷರು ಕೊಲ್ಲೂರಿನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಮರವಂತೆಗೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ದೂರವಾಣಿ ಕರೆ ಬಂದಿತ್ತು. ಕೂಡಲೇ ಸ್ಥಳೀಯಾಡಳಿತ ಅವರ ಮನೆಗಳನ್ನು ಸೀಲ್‌ಡೌನ್ ಕೂಡ ಮಾಡಿತ್ತು.
ಆದರೆ ಸೋಂಕಿತರನ್ನು ಕರೆದೊಯ್ಯಲು ಎರಡು ದಿನಗಳಾದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಇದು ಸ್ಥಳೀಯರು ಆಕ್ರೋಶಿತರಾಗುವಂತೆ ಮಾಡಿತ್ತು.
ಶನಿವಾರ ಸಂಜೆ ಅವರನ್ನೆಲ್ಲ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಹೇಳಲಾಯಿತು. ಮೊದಲೇ ಕೋವಿಡ್-19 ಪಾಸಿಟಿವ್ ಬಂದ ಸುದ್ದಿಯಿಂದ ಕಂಗಾಲಾಗಿದ್ದ ಅವರು ಆ್ಯಂಬುಲೆನ್ಸ್ ಮತ್ತು ಆರೋಗ್ಯ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಗ್ರಾಮ ಲೆಕ್ಕಾಧಿಕಾರಿ ಎಲ್ಲರನ್ನೂ ಮನವೊಲಿಸಿದ ಬಳಿಕ ಸೋಂಕಿತರು ಆ್ಯಂಬುಲೆನ್ಸ್ ಹತ್ತಿದರು. ಇದೇ ಸನ್ನಿವೇಶ ಬೈಂದೂರು ತಾಲೂಕಿನ ಹಲವೆಡೆ ನಡೆದಿದೆ. ಇದಕ್ಕೆ ಕಾರಣ ವರದಿ ಬರುವ ಮೊದಲೇ ಕ್ವಾರಂಟೈನ್‌ನಲ್ಲಿದ್ದವರನ್ನು ಮನೆಗೆ ಕಳುಹಿಸಿರುವುದು, ತಾಲೂಕಿನಲ್ಲಿ ಒಮ್ಮೆಲೇ ನೂರಾರು ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿರುವುದು ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದು ಕಾರಣವಾಗಿದೆ.