ಮಂಗಳೂರು: ಒಳ ಉಡುಪಿನಲ್ಲಿ 2ಕೆಜಿ ಚಿನ್ನ ಸಾಗಾಟ ಯತ್ನ ಇಬ್ಬರ ಬಂಧನ
ಮಂಗಳೂರು: ಕೋಟಿ ಬೆಲೆಬಾಳುವ ಚಿನ್ನವನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದ ಪ್ರಯಾಣಿಕರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37) ಹಾಗೂ ಮೊಹಮ್ಮದ್ ಶೋಹೈಬ್ (31) ಬಂಧಿತ ಆರೋಪಿಗಳು. ಇವರು ಶಾರ್ಜಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು, ವೇಳೆ ಸಂಶಯದ ಮೇರೆಗೆ ಅವರನ್ನು ತಪಾಸಣೆ ನಡೆಸಿದಾಗ, ಒಳ ಉಡುಪಿನಲ್ಲಿ 24 ಕ್ಯಾರೆಟ್ನ 2.154 ಕೆ.ಜಿ. ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಇದೀಗ ಆರೋಪಿಗಳನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು 1.09 ಕೋಟಿ. ರೂ ಮೌಲ್ಯದ 2.15 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ ಕಂಡಿ, ಸೂಪರಿಂಟೆಂಡೆಂಟ್ ಶ್ರೀಕಾಂತ್ ಕೆ., ಶುಭೆಂದು ರಂಜನ್ ಬೆಹರೆ, ನವೀನ್ಕುಮಾರ್ ಅವರನ್ನು ಒಳಗೊಂಡ ತಂಡ ಭಾಗವಹಿಸಿದ್ದು, ಈ ತಂಡವನ್ನು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್ ಅವರು ಅಭಿನಂದಿಸಿದ್ದಾರೆ.