ಜಿಲ್ಲಾಧಿಕಾರಿ ವರ್ಗಾವಣೆ ಸುದ್ಧಿ ಕೇಳಿ ಜನತೆ ಕಣ್ಣೀರಿಟ್ಟಿದ್ದು ಯಾಕೆ ಗೊತ್ತ…?
ಪತ್ತನತ್ತಿಟ್ಟಂ: ಎಲ್ಲರಿಂದ ಮೆಚ್ಚುಗೆಗಳಿಸಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರಲ್ಲೂ ಸರಕಾರಿ ಅಧಿಕಾರಿಗಳು ಜನ ಸಾಮಾನ್ಯರಿಂದ ಗೌರವ, ಅಭಿಮಾನ, ಪ್ರೀತಿಗೆ ಪಾತ್ರವಾಗಬೇಕಾದರೆ ಆ ವ್ಯಕ್ತಿಯು ಅದೇ ರೀತಿ ಸೇವೆ ನೀಡಿರಬೇಕಾಗುತ್ತದೆ. ಇಲ್ಲವಾದಲ್ಲಿ ಅಷ್ಟು ಸುಲಭವಾಗಿ ಜನರ ಅಭಿಮಾನ ಗಳಿಸುವುದು ಸಾದ್ಯವಿಲ್ಲ. ಆದರೆ ಕೇರಳದ ಪತ್ತನತ್ತಿಟ್ಟಂ ಜಿಲ್ಲೆಯಲ್ಲಿ 2018 ರಿಂದ ಸೇವೆ ಆರಂಭಿಸಿದ ಜಿಲ್ಲಾಧಿಕಾರಿ ಪಿ.ಬಿ ನೂಹ್ ಅವರು ವರ್ಗಾವಣೆ ಸುದ್ಧಿ ಕೇಳಿ ಅಲ್ಲಿನ ಜನತೆ ಅಭಿಮಾನದಿಂದ ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಸೇವೆಗಳು. ಹೌದು 2018ರ ಜೂನ್ ನಲ್ಲಿ ಪತ್ತನಂತಿಟ್ಟ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಎರಡೇ ತಿಂಗಳಿನಲ್ಲಿ ಕೇರಳವು ಅತೀ ದೊಡ್ಡ ಪ್ರಳಯವನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿತ್ತು. ನೂಹ್ ರೊಂದಿಗೆ ಸಹಕರಿಸಲು ಈ ಹಿಂದಿನ ಜಿಲ್ಲಾಧಿಕಾರಿ ಹರಿಕಿಶೋರ್ ರನ್ನೂ ಸರಕಾರ ನೇಮಿಸಿತು. ಇವರಿಬ್ಬರೂ ಸೇರಿಕೊಂಡು ಸರಿಸುಮಾರು ದೈನಂದಿನ 20 ಗಂಟೆಗಳ ಕಾಲ ಕೆಲಸ ನಿರ್ವಹಿಸಿ, ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಿ ಜನರ ನಡುವೆಯೇ ನಿಂತು ಅವರ ಕಷ್ಟಕ್ಕೆ ಹೆಗಲು ನೀಡಿ, ವಸ್ತುಗಳ ಸಾಗಾಟದಲ್ಲಿ ನೆರವಾಗಿದ್ದು ಮಾತ್ರವಲ್ಲದೆ ಅವರ ಜನರ ಸಮಸ್ಯೆಗಳಿಗೆ ಸರಿಯಾದ ಸಮಯದಲ್ಲಿ ಸ್ಪಂಧಿಸಿ ಭರವಸೆಯ ಕಿರಣವಾಗಿದ್ದರು. 2019ರಲ್ಲಿ ಮತ್ತೆ ಪ್ರಳಯ ಮರುಕಳಿಸಿದಾಗಲೂ ಪಿ.ಬಿ ನೂಹ್ ಅವರು ಅದನ್ನೂ ಸಮರ್ಪಕವಾಗಿ ನಿರ್ವಹಿಸಿದರು. ಪತ್ತನತ್ತಿಟ್ಟಂ ಜಿಲ್ಲೆಯಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರ ಶಬರಿಮಲೆಗೆ ಸುಪ್ರೀಂ ಕೋರ್ಟ್ ಮಹಿಳೆಯರಿಗೂ ಪ್ರವೇಶ ಮಾಡಬಹುದು ಎಂದು ತೀರ್ಪು ಹೊರಡಿಸಿದಾಗ ಹಲವಾರು ಪ್ರತಿಭಟನೆಗಳು, ಹಿಂಸಾಚಾರಗಳು ನಡೆದವು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ನೂಹ್ ಪಟ್ಟ ಶ್ರಮ ಅಪಾರ ಎನ್ನುತ್ತಾರೆ ಜಿಲ್ಲೆಯ ಜನತೆ. ಇನ್ನು 2020ರಲ್ಲಿ ಕೋವಿಡ್ ಮಹಾಮಾರಿ ಬೀಕರ ಪ್ರಳಯಕ್ಕಿಂತಲೂ ಹೆಚ್ಚಾಗಿ ಕಾಡಿತ್ತು. ಅದರಲ್ಲೂ ಪತ್ತನತ್ತಿಟ್ಟಂ ಜಿಲ್ಲೆಯಲ್ಲಿ ದೇಶದಲ್ಲಿಯೇ ಮೊದಲ 5 ಪ್ರಕರಣಗಳು ದಾಖಲಾಗಿತ್ತು. ದೇಶದ ಮೊದಲ ಹಾಟ್ ಸ್ಪಾಟ್ ಎಂಬ ಅಪಕೀರ್ತಿಗೂ ಪಾತ್ರವಾಗಿತ್ತು. ಆದರೆ ಈ ಸಂದರ್ಭದಲ್ಲಿ ಸೋಂಕಿತರು ಪ್ರಯಾಣಿಸಿದ ಮ್ಯಾಪ್ ಅನ್ನು ಮೊದಲು ತಯಾರಿಸಿದ್ದು ಪತ್ತನತ್ತಿಟ್ಟಂ ಜಿಲ್ಲೆ ಆಗಿತ್ತು. ದೇಶದ ಉಳಿದ ಭಾಗಗಳಲ್ಲಿ ಮೊದಲ ಪ್ರಕರಣ ಕಂಡು ಬರುವ ಮೊದಲೇ ಈ ಜಿಲ್ಲೆಯಲ್ಲಿ ಲಾಕ್ ಡೌನ್, ಕಾಲ್ ಸೆಂಟರ್ ಗಳು, ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಹಾಗೂ ಕ್ವಾರಂಟೈನ್ ವ್ಯವಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಪಿ.ಬಿ ನೂಹ್ ರಿಗೆ ಸಲ್ಲುತ್ತದೆ.ಇದೀಗ, ಎರಡು ಬಾರಿಯ ಪ್ರಳಯ,ಕೋವಿಡ್, ಲಾಖ್ ಡೌನ್ ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ್ದ ಪಿ.ಬಿ. ನೂಹ್ ಈಗ ವರ್ಗಾವಣೆಗೊಳ್ಳುತ್ತಿದ್ದಾರೆ. ಪತ್ತನಂತಿಟ್ಟದಿಂದ ಪಾಲಕ್ಕಾಡ್ ಜಿಲ್ಲೆಗೆ ಸಹಕಾರಿ ರಿಜಿಸ್ಟ್ರಾರ್ ಆಗಿ ವರ್ಗಾವಣೆಗೊಳ್ಳುತ್ತಿರುವ ಕುರಿತು ನೂಹ್ ರವರು ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ತಿಳಿಸುತ್ತಿದಂತೆ, ಅವರ ಪೋಸ್ಟ್ ಗೆ ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ. ತಮ್ಮ ಅಧಿಕೃತ ಪೇಸ್ಬುಕ್ ಪೇಜ್ ನಲ್ಲಿ ಹೋಗಲು ಸಮಯವಾಗಿದೆ, ಪ್ರೀತಿಯ ಪತ್ತನಂತಿಟ್ಟ, ನಿಮ್ಮನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಂತೆ, ಇತ್ತ ಜಿಲ್ಲೆಯ ಜನತೆಯಿಂದ ಅಭಿಮಾನದ ಪ್ರತಿಕ್ರಿಯೆ, ಧನ್ಯವಾದ, ಶುಭಾಶಯಗಳ ಮಹಾಪೂರವೇ ಹರಿದು ಬರಲು ಪ್ರಾರಂಭವಾಗಿದೆ. ಒಬ್ಬರು, ನೀವು ತೋರಿಸಿರುವ ದಾರಿಯಲ್ಲಿ ನಾವು ನಡೆಯುತ್ತೇವೆ. ಕಳೆದ ಮೂರು ವರ್ಷಗಳು ನಮಗೆ ಪರೀಕ್ಷೆಯ ಅವಧಿಯಾಗಿತ್ತು. ನಾವು ಈ ಪರೀಕ್ಷೆಯನ್ನು ನಿಮ್ಮಿಂದಾಗಿ ಗೆದ್ದುಕೊಂಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರೆ, ಮತ್ತೊಬ್ಬರು ನಾವು ನಿಮ್ಮ ಕೈಗಳಲ್ಲಿ ಅತ್ಯುತ್ತಮ ಸುರಕ್ಷತೆಯನ್ನು ಅನುಭವಿಸಿದ್ದೇವೆ. ನಿಮ್ಮ ಕುರಿತು ನಮಗೆ ಹೆಮ್ಮೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇಷ್ಟೆಲ್ಲ ಪ್ರೀತಿ , ಆದರ, ಗೌರವ ಕೇವಲ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಾತ್ರಕ್ಕೆ ಸಿಗುವುದಿಲ್ಲ. ಇದು ಅವರು ಆ ಜಿಲ್ಲೆಗೆ ಸಲ್ಲಿಸಿದ ಸೇವೆಯ ಪ್ರತಿಯಾಗಿ ಅವರಿಗೆ ಸಿಗುತ್ತಿರುವ ಗೌರವ. ಅವರ ಪೋಸ್ಟ್ಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಗಳು ಅವರು ಮಾಡಿರುವ ಸೇವೆಗಳಿಗೆ ಹಿಡಿದ ಕೈಗನ್ನಡಿಯಂತಿದೆ. |