ಬ್ಲಾಕ್ ಮೇಲ್ ಸಿಡಿ: ಮುಖ್ಯಮಂತ್ರಿ ದೂರು ದಾಖಲಿಸಲಿ- ಸಿದ್ದರಾಮಯ್ಯ ಸವಾಲು

ಮೈಸೂರು: ಸಂಪುಟ ವಿಸ್ತರಣೆ ಬೆನ್ನೆಲ್ಲೆ ರಹಸ್ಯ ಸಿಡಿ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದ ಸೃಷ್ಟಿಸಿರುವಂತೆಯೇ ಬ್ಲಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೂರು ದಾಖಲಿಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಒಂದು ವೇಳೆ ನಕಲಿ ಸಿಡಿಯನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರೆ ಅಂತಹ ಪಿತೂರಿಯ ಹಿಂದಿರುವ ಸತ್ಯವನ್ನು ತಿಳಿಯಲು ಮುಖ್ಯಮಂತ್ರಿ ಕೂಡಲೇ ಪೊಲೀಸರಿಗೆ ದೂರು ನೀಡಲಿ. ಎಲ್ಲರನ್ನೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ, ದುರ್ಬಲ ಮುಖ್ಯಮಂತ್ರಿಗಳನ್ನು ಮಾತ್ರ ಬ್ಲಾಕ್ ಮೇಲ್ ಮಾಡಲಾಗುತ್ತದೆ. ಯಾವುದೇ ಪಕ್ಷದವರಿಂದ ಬ್ಲಾಕ್ ಮೇಲ್ ಮಾಡುತ್ತಿದ್ದರೆ ಮುಖ್ಯಮಂತ್ರಿ ದೂರು ಸಲ್ಲಿಸಲಿ ಎಂದರು.

ಬಿಜೆಪಿಯವರೇ  ಆರೋಪ ಹೊರಿಸುತ್ತಿರುವುದರಿಂದ ಅದರಲ್ಲಿ ಕೆಲವು ಸತ್ಯಗಳಿವೆ ಎಂದು ಭಾವಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ, ಅನೇಕ ಶಾಸಕರು ಸಚಿವ ಸ್ಥಾನ ಪಡೆಯಲು ಸಿಡಿ ಬಳಸಿ ಮುಖ್ಯಮಂತ್ರಿಯನ್ನು ಬ್ಲಾಕ್ ಮೇಲ್ ಮಾಡಿರುವುದಾಗಿ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ಇಂತಹ ಕೆಲಸ ಮಾಡಲಿ, ಸಚಿವ ಸ್ಥಾನಕಾಂಕ್ಷಿಗಳ ಒತ್ತಡಕ್ಕೆ ಮುಖ್ಯಮಂತ್ರಿ ಸಿಲುಕಿದ್ರಾ? ಮತ್ತಿತರ ಸತ್ಯಾಂಶ ಹೊರಗೆ ಬರಲು ಮುಖ್ಯಮಂತ್ರಿ ದೂರು ದಾಖಲಿಸಲಿ ಎಂದು ಪ್ರತಿಪಕ್ಷ ನಾಯಕ ಒತ್ತಾಯಿಸಿದರು.

ಯಡಿಯೂರಪ್ಪ ಸರ್ಕಾರದಲ್ಲಿ ಕುಟುಂಬ ರಾಜಕಾರಣವಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಇಬ್ಬರು  ಮುಖ್ಯಮಂತ್ರಿಗಳಿದ್ದಾರೆ. ನಿಜವಾದ ಅಧಿಕಾರ ಯಡಿಯೂರಪ್ಪನ ಮಗನ ಕೈಯಲ್ಲಿದೆ. ಸರಿಯಾದ ಆಡಳಿತವಿಲ್ಲದೆ ಜನರು ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!