ತೆಲಂಗಾಣ: 10ನೇ ತರಗತಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳಿಗೆ ಬಡ್ತಿ
ಹೈದರಾಬಾದ್: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಯಾವುದೇ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಿ ಮುಂದಿನ ತರಗತಿಗೆ ಕಳುಹಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೋಮವಾರ ಹೇಳಿದ್ದಾರೆ.
‘10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಅವರ ಆಂತರಿಕ ಮೌಲ್ಯಮಾಪನ ಅಂಕಗಳ ಆಧಾರದ ಮೇಲೆ ಶ್ರೇಣಿ ನೀಡುವ ಮೂಲಕ ಮುಂದಿನ ತರಗತಿಗೆ ಬಡ್ತಿ ನೀಡಲು ರಾವ್ ನಿರ್ಧರಿಸಿದ್ದಾರೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ 10ನೇ ತರಗತಿಯ 5.35 ಲಕ್ಷ ವಿದ್ಯಾರ್ಥಿಗಳಿದ್ದು, ಎಲ್ಲರನ್ನೂ ತೇರ್ಗಡೆ ಮಾಡಲಾಗುವುದು. ಅಲ್ಲದೆ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಬಗ್ಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.