ರೆಡ್ಕ್ರಾಸ್ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಪರಿಹಾರ ಸಾಮಾಗ್ರಿಯ ಕಿಟ್ ವಿತರಣೆ
ಉಡುಪಿ, ಜ.13: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಕೋವಿಡ್-19 ಸಂದರ್ಭದಲ್ಲಿಯೂ ಜೀವದ ಹಂಗು ತೊರೆದು ಇತರರ ಜೀವವನ್ನು ಉಳಿಸಲು ಹಗಲಿರುಳು ದುಡಿದ ಸಿಬ್ಬಂದಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯಿoದ ಕಿಟ್ ವಿತರಿಸಿ, ಅವರ ಸೇವೆಯನ್ನು ಪ್ರಶಂಸಿಸಿದರು.
ಗೌರವ ಕಾರ್ಯದರ್ಶಿ ಕೆ. ಜಯರಾಮ್ ಆಚಾರ್ಯ ಸಾಲಿಗ್ರಾಮ, ರೆಡ್ ಕ್ರಾಸ್ ಸಂಸ್ಥೆಯು ಮಾಡುತ್ತಿರುವ ಸೇವೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ರೆಡ್ಕ್ರಾಸ್ ಆಡಳಿತ ಮಂಡಳಿ ಸದಸ್ಯರು, ಡಿಡಿಆರ್ಸಿ ಸದಸ್ಯ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ ಹಾಗೂ ನೋಡಲ್ ಅಧಿಕಾರಿಗಳಾದ ಅನುಷಾ ಆಚಾರ್ಯ, ಸುನೀತಾ ಉಪಸ್ಥಿತರಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹೈಟೆಕ್ ಆಸ್ಪತ್ರೆ, ಪ್ರಣವ್ ಆಸ್ವತ್ರೆ ಮತ್ತು ಗೋರಟೆ ಆಸ್ವತ್ರೆಯ ಒಟ್ಟು 45 ಸಿಬ್ಬಂದಿಗಳಿಗೆ ಕಿಚನ್ ಸೆಟ್ಸ್, ಫೇಸ್ ಮಾಸ್ಕ್ ಮತ್ತು ಸೋಪುಗಳನ್ನು ವಿತರಿಸಲಾಯಿತು.