‘ಕೌನ್ ಬನೇಗಾ ಕರೋಡ್‌ಪತಿ’ ಭಾಗವಹಿಸಲಿರುವ ರವಿ ಕಟಪಾಡಿ

ಉಡುಪಿ: ಜಿಲ್ಲೆಯಲ್ಲಿ ಪ್ರತೀ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ವಿಭಿನ್ನ ವೇಷ ಧರಿಸಿ ಜನರನ್ನು ರಂಜಿಸುವ ಜೊತೆಗೆ ಅದರಿಂದ ಗಳಿಸಿದ ಮೊತ್ತವನ್ನು ಆಯ್ದ ಅಶಕ್ತ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತಾ ಜಿಲ್ಲೆಯ ಜನರ ಪ್ರೀತಿಗೆ ಪಾತ್ರವಾಗಿದ್ದ ರವಿ ಕಟಪಾಡಿ ಅವರು, ಇದೀಗ ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ  ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿ ಕಟಪಾಡಿ ಅವರ ಮಾನವೀಯ ಸಮಾಜಮುಖಿ ಸೇವಾಕಾರ್ಯ ಗುರುತಿಸಿ ವಾಹಿನಿ ಅವರಿಗೆ ಈ ಅವಕಾಶ ನೀಡಿದೆ.

ಮೊದಲಿಗೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ಆಯೋಜಕರು ರವಿ ಕಟಪಾಡಿ ಅವರಿಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ಬಾಗವಹಿಸುವಂತೆ ಕೇಳಿಕೊಂಡಾಗ ರವಿ ಅವರು ಈ ಅವಕಾಶವನ್ನು ತಿರಸ್ಕರಿಸಿದ್ದರು. ಆ ಬಳಿಕ ಮತ್ತೊಮ್ಮೆ ಕರೆ ಮಾಡಿ ಕೇಳಿಕೊಂಡಾಗ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈಯಿಂದ ರವಿ ಕಟಪಾಡಿ ಅವರ ಮನೆಗೆ ಆಗಮಿಸಿದ್ದ ವಾಹಿನಿಯ ತಂಡದವರು ಮನೆ ಹಾಗೂ ಅವರ ಸಾಮಾಜಿಕ ಕೆಲಸ ಕಾರ್ಯಗಳನ್ನು ದಾಖಲಿಸಿಕೊಂಡಿದ್ದಾರೆ.

ಜ.13 ಮುಂಬೈನಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆಯಲಿದ್ದು, ಜ.15ರಂದು ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ 12ನೇ ಸೀಸನ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರು ವ್ಯಕ್ತಿಗಳು ಭಾಗವಹಿಸುತ್ತಿದ್ದು, ಈ ಪೈಕಿ ಉಡುಪಿಯಲ್ಲಿ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ರವಿ ಕಟಪಾಡಿ ಅವರು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

Leave a Reply

Your email address will not be published. Required fields are marked *

error: Content is protected !!