ಲಸಿಕೆ ಪಡೆಯಲು ಮೆಸೇಜ್ ಬಂದವರು ಮಾತ್ರ ಕೇಂದ್ರಕ್ಕೆ ಬನ್ನಿ: ಜಿಲ್ಲಾ ಆರೋಗ್ಯಾಧಿಕಾರಿ ಸೂಡಾ

ಉಡುಪಿ ಮೇ.10(ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಖಾಸಗಿಯಾಗಿ ಸರಕಾರದಿಂದ ಲಸಿಕೆ ಕೊಡುವ ವ್ಯವಸ್ಥೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡಾ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಅವರು, ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳನ್ನು ಆಯುಷ್ಮಾನ್ ಭಾರತ್ ಅಡಿಯಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ಒಬ್ಬ ರೋಗಿಯನ್ನು ಆಯುಷ್ಮಾನ್ ಭಾರತ್ ಅಡಿಯಲ್ಲಿ ದಾಖಲು ಮಾಡಬೇಕಾದರೆ ರೋಗಿಗಳು ಈ ಮೊದಲು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯ ಮೂಲಕ‌ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಟ್ರಾಯಲ್ ಅರ್ಜಿಯಲ್ಲಿ ರೋಗಿಯನ್ನು ಸಮರ್ಥಿಸಿ ಅರ್ಜಿ ಬರೆದು ಕೋವಿಡ್ ಕಾಲ್ ಸೆಂಟರ್ ಗೆ ನೀಡಿದಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಇದ್ದರೂ ನಾವು ಅವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸ್ವೀಕರಿಸುತ್ತೇವೆ.

ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಇರುವ ರೋಗಿಗಳ ಬಗ್ಗೆ ಆಸ್ಪತ್ರೆಯವರೇ ಆನ್ಲೈನ್ ಮಾಹಿತಿ ನೀಡಿ ಲಸಿಕೆ ಪಡೆದುಕೊಳ್ಳ ಬೇಕಾಗುತ್ತದೆ. ಒಂದು ವೇಳೆ ರೋಗಿಗಳು ಎಬಿಆರ್ ಕೆ ಅಡಿಯಲ್ಲಿ  ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಆಸ್ಪತ್ರೆಯವರು ಆರೋಗ್ಯ ಇಲಾಖೆಗೆ ರೋಗಿಯ ಮಾಹಿತಿ ನೀಡುವ ಮೂಲಕ ಲಸಿಕೆ ಪಡೆದುಕೊಳ್ಳ ಬಹುದು. ಆದರೆ ಯಾವುದೇ ಕಾರಣಕ್ಕೂ ಖಾಸಗಿಯಾಗಿ ರೋಗಿಗಳಿಗೆ ಸರಕಾರದಿಂದ ಲಸಿಕೆ ನೀಡುವ ವ್ಯವಸ್ಥೆ ಇಲ್ಲ ಎಂದರು.

ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ 223 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 83.44ಶೇ. ದಷ್ಟು ಸೋಂಕಿತರು ಗುಣಮುಖರಾಗುತ್ತಿದ್ದು, 0.58 ಶೇ. ಮರಣ ಪ್ರಮಾಣ ಇದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈಗಲೂ ಕೋವಿಡ್ ರೋಗಿಗಳು ಕೊನೆಯ ಘಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದು, ಆದ್ದರಿಂದ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಲು ತೊOದರೆ ಆಗುತ್ತಿದೆ. ನಮ್ಮಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಇಂಜೆಕ್ಷನ್ ಗಳಿಗಳಿಗೆ ಕೊರತೆ ಇಲ್ಲ. ಆದರೆ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಜಿಲ್ಲೆಯ ಮೂರು ತಾಲೂಕಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹೋಮ್ ಐಸೊಲೇಶನ್ ನಲ್ಲಿ ಇರುವವರು ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕಾಲ್ ಸೆಂಟರ್ ಮೂಲಕ ಮಾಹಿತಿ ನೀಡಿ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲು ಪಡೆಯಬಹುದು. ರೋಗಿಗಳು ಒಮ್ಮೆ ದಾಖಲಾತಿ ಪಡೆದುಕೊಂಡ ನಂತರ ಆರೋಗ್ಯದಲ್ಲಿ 2-3 ಗಳಲ್ಲಿ ಚೇತರಿಕೆ ಕಂಡು ಬಂದರೆ ಅವರು ಮತ್ತೆ ಮನೆಯಲ್ಲಿಯೇ ಹೋಂ ಐಸೊಲೇಶನ್ ಆಗುವ ವ್ಯವಸ್ಥೆ ಮಾಡಿಕೊಳ್ಳಬಹುದು. 

ಜಿಲ್ಲೆಯಲ್ಲಿ ಸೋಂಕಿನಿಂದ ಸಂಭವಿಸುತ್ತಿರುವ ಸಾವಿನ ಬಗ್ಗೆ ನಿಖರವಾದ ಮಾಹಿತಿ ನೀಡಲಾಗುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಆಸ್ಪತ್ರೆಗಳಲ್ಲಿ ಯಾವುದೇ ಸಾವು ಸಂಭವಿಸಿದ ಬಳಿಕ ಆ ಬಗ್ಗೆ ಡೆತ್ ಆಡಿಟ್ ಕಮಿಟಿಯಲ್ಲಿ  ಚರ್ಚೆ ಮಾಡಿ ಸಾವು ಕೋವಿಡ್ ಸೋಂಕಿನಿಂದ ಸಂಭವಿಸಿದೆಯೇ ಅಥವಾ ಇನ್ಯಾವುದಾದರೂ ಕಾರಣದಿಂದ ಸಂಭವಿಸಿರಬಹುದೇ ಎಂದನ್ನು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ಬಳಿಕ ನಮಗೆ ಬಂದ ವರದಿಯನ್ನು ಆಧರಿಸಿ ಪ್ರಾಮಾಣಿಕವಾಗಿ ನಾವು ಮೀಡಿಯಾ ಬುಲೆಟಿನ್ ನಲ್ಲಿ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇನ್ನು‌ ಲಸಿಕೆ ವಿತರಣೆಯ ಅಭಿಯಾನದ ನಂತರ 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲಾಗುತ್ತಿದ್ದು.ಸರಬರಾಜು ಆಗಿರುವ ಲಸಿಕೆಯ ಆಧಾರದಲ್ಲಿ ಲಸಿಕೆ ನೀಡಲಾಗುತ್ತಿದೆ. ಆದ್ದರಿಂದ ಯಾರಿಗೆಲ್ಲಾ ಲಸಿಕೆ ಪಡೆಯಲು ಮೆಸೇಜ್ ಬಂದಿರುತ್ತದೆಯೋ ಅವರು ಮಾತ್ರ ತಮಗೆ ಸೂಚಿಸಿದ ಲಸಿಕಾ ಕೇಂದ್ರಕ್ಕೆ ಬರುವಂತೆ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!