2ನೇ ಹಂತದ ಲಾಕ್‌ಡೌನ್ ಸಡಿಲಿಕೆ ಘೋಷಣೆ-ಉಡುಪಿ, ದಕ ಸಹಿತ 13 ಜಿಲ್ಲೆಗೆ ಹಿಂದಿನ ಮಾರ್ಗಸೂಚಿಗಳೇ ಅನ್ವಯ
ಬೆಂಗಳೂರು: ರಾಜ್ಯ ಸರ್ಕಾರವು ಎರಡನೇ ಹಂತದ ಲಾಕ್‌ಡೌನ್ ಸಡಿಲಿಕೆ ಘೋಷಣೆ ಮಾಡಿದೆ.
ಶೇ. 5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ. ಆದರೆ, ಶೇ. 5 ಮತ್ತು 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಅನ್ವಯವಾಗಲಿದೆ. ಜುಲೈ 5ರ ವರೆಗೆ ಈ ಮಾರ್ಗಸೂಚಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
16 ಜಿಲ್ಲೆಗಳಲ್ಲಿ ಶೇ. 5ರಷ್ಟು, 13 ಜಿಲ್ಲೆಗಳಲ್ಲಿ ಶೇ. 5–10, ಮೈಸೂರಿನಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ ಎಂದು ಸಿಎಂ ತಿಳಿಸಿದರು.
ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಚಿಕ್ಕಬಲ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು(ಬಿಬಿಎಂಪಿ), ಗದಗ್, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಬೀದರ್‌ನಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ.
–ಎಲ್ಲ ಅಂಗಡಿಗಳು ಸಂಜೆ 5ರ ವೆರೆಗೆ ತೆರೆದಿರಲು ಅವಕಾಶ ನೀಡಲಾಗಿದೆ.
– ಎಸಿ ಚಾಲನೆ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ (ಮಧ್ಯಪಾನವಿಲ್ಲದೇ) ಕುಳಿತು ಆಹಾರ ಸೇವಿಸಲು ಸಂಜೆ 5 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಶೇ. 50ರ ಆಸನಗಳಲ್ಲಿ ಮಾತ್ರ ಅವಕಾಶ.
– ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
– ಬಸ್, ಮೆಟ್ರೋ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು.
– ಹೊರಾಂಗಣ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೇ ಕ್ರೀಡೆಗೆ ಅವಕಾಶ.
– ಸರ್ಕಾರ ಕಚೇರಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು.
– ಲಾಡ್ಜ್, ರೆಸಾರ್ಟ್‌ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಗ್ರಾಹಕಸೇವೆ. ಜಿಮ್‌ಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ ನೀಡಲಾಗಿದೆ. ಎಸಿ ಬಳಸುವಂತಿಲ್ಲ.
ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಜಿಲ್ಲೆಗಳಲ್ಲಿ ಹಿಂದಿನ ಮಾರ್ಗಸೂಚಿ ಮುಂದುವರಿಕೆ
ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಹಾಸನ, ಉಡುಪಿ, ದ.ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರಲ್ಲಿ ಜೂನ್ 11ರಂದು ತಿಳಿಸಿದ ಮಾರ್ಗಸೂಚಿಗಳು ಮುಂದುವರಿಯಲಿವೆ.
ಶೇ. 10ರಷ್ಟು ಇರುವ ಮೈಸೂರಿನಲ್ಲಿ ಈಗಿನ ನಿರ್ಬಂಧಗಳು ಮುಂದುವರಿಯಲಿವೆ.
ನೈಟ್ ಕರ್ಫ್ಯೂ ರಾತ್ರಿ 7 ರಿಂದ ಬೆಳಗ್ಗೆ 5ರ ವರೆಗೆ
ರಾಜ್ಯವ್ಯಾಪಿ ಅನ್ವಯ ಆಗುವಂತೆ ನೈಟ್ ಕರ್ಫ್ಯೂ ರಾತ್ರಿ 7ರಿಂದ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ. ವಾರಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ.
ನಿರ್ಬಂಧ ಯಾವುದಕ್ಕೆ?
ಈಜುಕೊಳ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾ ಸ್ಥಳ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್ ಗೆ ನಿರ್ಬಂಧ.