ಗೋಶಾಪದಿಂದ ಕಾಂಗ್ರೆಸ್ ಎಲ್ಲಾ ಸ್ತರಗಳಲ್ಲಿ ಅಧಿಕಾರ ಕಳೆದುಕೊಂಡಿದೆ: ಕೆ.ಎಸ್.ಈಶ್ವರಪ್ಪ
ಉಡುಪಿ: ನಮ್ಮಲ್ಲಿ ಹೊಸ ಬಿಜೆಪಿ ಹಳೇ ಬಿಜೆಪಿ ಎಂಬ ಪ್ರಶ್ನೆಯೇ ಬರೋದಿಲ್ಲ ಪಕ್ಷದ ಒಳಗೆ ಇರುವವರೆಲ್ಲರೂ ಬಿಜೆಪಿಯವರೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದವರು ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪಲ್ಲ. ಅನ್ಯ ಪಕ್ಷಗಳಿಂದ ಬಂದವರಿಗೆ ಸಚಿವ ಸ್ಥಾನದ ಭರವಸೆ ಕೊಟ್ಟಿದ್ದೇವೆ ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮಗಿದೆ. ಆದ್ದರಿಂದ ಶೇ. 50ರಷ್ಟು ಕ್ಯಾಬಿನೆಟ್ ಸ್ಥಾನವನ್ನು ಅನ್ಯ ಪಕ್ಷಗಳಿಂದ ಬಂದವರಿಗೆ ನೀಡಬೇಕಾಗುತ್ತದೆ. ಸಂಪುಟ ವಿಸ್ತರಣೆ ಕುರಿತಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಇದೆ ಆದರೂ ಮುಖ್ಯಮಂತ್ರಿಗಳು ಕೇಂದ್ರದ ನಾಯಕರ ಜೊತೆ ಚರ್ಚೆ ನಡೆಸಿ ಯಾರು ಸಚಿವರಾಗಬೇಕು ಎಂದು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಈ ವೇಳೆ ಸಚಿವ ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸ್ಪೋಟವಾಗುತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ ಹಾಗಾಗಿ ಅವರು, ಭಂಡತನದ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಮೊದಲು ತನ್ನ ಸ್ಥಾನ ಉಳಿಸಿಕೊಳ್ಳಬೇಕಾಗಿದೆ. ಯಾಕೆಂದರೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಡಿಕೆಶಿ ಕಣ್ಣಿಟ್ಟಿದ್ದು, ಸಿದ್ದರಾಮಯ್ಯನನ್ನು ಕಿತ್ತೆಸೆಯುವುದು ಹೇಗೆ ಎಂದು ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ತುಂಬಾ ಸ್ಪಷ್ಟವಾಗಿದೆ ಗೋಚರಿಸುತ್ತಿದ್ದೆ ಎಂದರು. ನಾವು ನಾಲ್ಕು ಜನ ಇದ್ದಾಗ ವಿರೋಧಪಕ್ಷ ಏನು ಅನ್ನೋದನ್ನು ತೋರಿಸಿದ್ದೇವೆ.
ಆದ್ರೀಗ ಕರ್ನಾಟಕ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ ಎಂದ ಅವರು, ಯಾವುದನ್ನು ವಿರೋಧಿಸಬೇಕು ಅನ್ನುವ ಪರಿಜ್ಞಾನ ಇಲ್ಲದ ವಿರೋಧ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದೆ. ಯಾವುದರಲ್ಲಿ ರಾಜಕೀಯ ಮಾಡಬೇಕು ಅನ್ನೋದು ವಿಪಕ್ಷಗಳಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನೇ ನಿರ್ನಾಮ ಮಾಡಿದ್ದು, ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಕೋವಿಡ್ ಲಸಿಕೆ ವಿಚಾರವಾಗಿ ಪ್ರತಿಕ್ರಿಸಿ ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದ ಅವರು ಪ್ರಧಾನಿ ಮೋದಿ ಪ್ರಪಂಚ ಮೆಚ್ಚುವ ರೀತಿಯಲ್ಲಿ ಕೋವಿಡ್ ನಿಯಂತ್ರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೂ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಲಸಿಕೆ ಹಂಚಿಕೆ ವಿಚಾರದಲ್ಲಿ ಪಕ್ಷ, ಜಾತಿ ಯಾವುದನ್ನೂ ಪರಿಗಣಿಸದೇ ನಿಸ್ಪಕ್ಷಪಾತವಾಗಿ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ಕಾಂಗ್ರೆಸ್ ನವರು ಸಹಕಾರ ಕೊಟ್ಟರೆ ಸಂತೋಷವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಕೆಲಸವನ್ನು ಮಾಡಿಕೊಂಡು ಹೋಗ್ತೇವೆ ಎಂದರು.
ಕಾಂಗ್ರೆಸ್ಗೆ ಗೋಶಾಪ: ಹಿಂದೆ, ಸದನದಲ್ಲಿ ಗೋಕಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದಾಗ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಗೋಶಾಪ ತಟ್ಟಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರು. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಕಾಂಗ್ರೆಸ್ಗೂ ಗೋಶಾಪ ತಟ್ಟಿರುವುದರಿಂದ ಎಲ್ಲ ಸ್ತರಗಳಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು ಈಶ್ವರಪ್ಪ ಹೇಳಿದರು.
‘ಗೋವುಗಳ ವಿರುದ್ಧ ಹಗುರವಾಗಿ ಮಾತನಾಡಿದರೆ, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಮಾತನಾಡಿದರೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಾಂಗ್ರೆಸ್ ಮೌನವಾಗಿದ್ದರೂ ರಾಜ್ಯ ಸರ್ಕಾರ ದೇಶವಿರೋಧಿಗಳ ಸೊಕ್ಕು ಮುರಿಯಲಿದೆ’ ಎಂದು ಈಶ್ವರಪ್ಪ ಹೇಳಿದರು.
ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಾಲಿಶ. ಮೊದಲು ಅವರು ವಿರೋಧ ಪಕ್ಷದ ಕುರ್ಚಿ ಉಳಿಸಿಕೊಳ್ಳಲಿ. ಡಿ.ಕೆ.ಶಿವಕುಮಾರ್ ಸ್ಥಾನ ಕಿತ್ತುಕೊಳ್ಳಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಹಗಲು ಗನಸು ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.