ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
2010ರ ಶಬ್ಧ ಮಾಲಿನ್ಯ ನಿಯಂತ್ರಣಾ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
‘ಧ್ವನಿವರ್ಧಕ ಬಳಕೆ ವಿರುದ್ಧ ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಂತಹ ನಿರ್ದೇಶನಗಳನ್ನು ರಾಜ್ಯ ಸರ್ಕಾರ ತಕ್ಷಣ ಪರಿಗಣಿಸಬೇಕು’ ಎಂದು ಪೀಠ ಹೇಳಿತು.
‘ಶಬ್ಧ ಮಾಲಿನ್ಯ ನಿಯಂತ್ರಣಾ ನಿಯಮಗಳನ್ನು ಪಾಲಿಸದೇ ಇರುವುದು ನಾಗರಿಕರ ಹಕ್ಕುಗಳ ಉಲ್ಲಂಘನೆ ಆಗಲಿದೆ. ನಿಯಮ ಪಾಲಿಸದೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡು ಮೂರು ವಾರಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು’ ಎಂದು ತಿಳಿಸಿತು.