ಪುತ್ತೂರು ದೇವಸ್ಥಾನದ ಚಿನ್ನಾಭರಣ ದೋಚಿ, ಅಪವಿತ್ರ ಗೊಳಿಸಿದ ದುಷ್ಕರ್ಮಿಗಳು
ಪುತ್ತೂರು: ಕಳ್ಳತನಕ್ಕೆಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಕಳ್ಳತನ ನಡೆಸುವ ಜೊತೆಗೆ ಕ್ಷೇತ್ರವನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇಂದು ಬೆಳಿಗ್ಗಿನ ಪೂಜೆಗೆಂದು ದೇವಸ್ಥಾನದ ಬಾಗಿಲು ತೆರೆದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಪ್ರಾಂಗಣದ ಹೆಂಚು ತೆಗೆದು ಒಳ ನುಗ್ಗಿರುವ ಕಳ್ಳರು ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿಯ ಸರ, ಬಂಗಾರದ ಪದಕ ಹಾಗೂ ಬೆಳ್ಳಿಯ ಇತರೆ ಪೂಜಾ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕಳ್ಳರು ಕೇವಲ ಕಳ್ಳತನ ನಡೆಸಿದ್ದು ಮಾತ್ರವಲ್ಲದೆ ದೇವಸ್ಥಾನದ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಸುತ್ತಲೂ ಉಗುಳಿದ್ದು, ದೇವರ ಅಭಿಷೇಕಕ್ಕೆಂದು ತಂದಿರುವ ಸೀಯಾಳಗಳನ್ನು ದೇವಸ್ಥಾನದ ಒಳಗೇ ಕುಡಿದು ಮದ್ಯವನ್ನೂ ಸೇವಿಸಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆ. ಈ ನಡುವೆ, ಈ ಕಳ್ಳರು ಕಳ್ಳತನ ನಡೆಸುವ ಉದ್ದೇಶದಿಂದ ದೇವಸ್ಥಾನಕ್ಕೆ ಬಂದಿದ್ದರೇ ಅಥವಾ ದೇವಸ್ಥಾನವನ್ನು ಅಪವಿತ್ರಗೊಳಿಸುವ ಉದ್ಧೇಶದಿಂದಲೇ ದೇವಸ್ಥಾನದ ಒಳಗೆ ನುಗ್ಗಿದ್ದಾರೆಯೇ ಎನ್ನುವ ಸಂಶಯ ಮೂಡಿದೆ.
ಕಳ್ಳತನದ ಜೊತೆಗೆ ಸಮಾಜದ ಶಾಂತಿ ಕದಡುವ ಉದ್ಧೇಶವೂ ಇಂಥಹ ಕೃತ್ಯಗಳ ಹಿಂದೆ ಇರುವುದು ಮೇಲ್ನಾಟಕ್ಕೆ ಕಂಡು ಬರಲಾರಂಭಿಸಿದ್ದು, ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುವ ಅನಿವಾರ್ಯತೆಯಿದೆ. ಈಗಾಗಲೇ ಪುತ್ತೂರಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ಕಳ್ಳತನದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ದೇವಸ್ಥಾನಕ್ಕೆ ನುಗ್ಗುವ ಮೊದಲು ಕಳ್ಳರ ತಂಡ ದೇವಸ್ಥಾನದ ಪಕ್ಕದಲ್ಲೇ ಇರುವ ಮೂರು ಅಂಗಡಿಗಳಲ್ಲೂ ಕಳ್ಳತನ ನಡೆಸಿದೆ. ಪೋಲೀಸರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಭಕ್ತರ ಭಾವನೆಗೆ ಧಕ್ಕೆ ತರುವ ಇಂಥಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಪೋಲೀಸರನ್ನು ಒತ್ತಾಯಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಆರಾಧನಾ ಕೇಂದ್ರಗಳಲ್ಲಿ ಇಂಥಹ ವಿಕೃತಿ ಮೆರೆಯುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ದೇವಸ್ಥಾನದಲ್ಲಿ ಸಿಸಿ ಕ್ಯಾಮಾರಾ ಅಳವಡಿಸಬೇಕು ಎನ್ನುವ ಒತ್ತಾಯವೂ ಭಕ್ತರಿಂದ ಕೇಳಿ ಬಂದಿದೆ.