ಬೆಳಪು: ಪಡಿತರ ಕಿಟ್ ವಿತರಣೆ ಬಗ್ಗೆ ಅಪಪ್ರಚಾರ: ಸೆನ್ ಪೊಲೀಸರಿಗೆ ದೂರು
ಉಡುಪಿ: ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾಗಿರುವ ಕುಟುಂಬಗಳಿಗೆ ಮತ್ತು ತನ್ನ ಗ್ರಾಮದ ಬಹುತೇಕ ಎಲ್ಲ ಕುಟುಂಬಗಳಿಗೆ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ದಾನಿಗಳಿಂದ ಸಂಗ್ರಹಿಸಿ ನೀಡುತ್ತಿರುವ ಪಡಿತರ ಕಿಟ್ ಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಪು ಗ್ರಾಮದ ನಿವಾಸಿ ಸಮಾಜ ಸೇವಕ ಜಹೀರ್ ಅಹಮದ್ ಉಡುಪಿ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಪು ಗ್ರಾಮದಲ್ಲಿ ದಾನಿಗಳ ಸಹಕಾರದೊಂದಿಗೆ ಡಾ. ದೇವಿಪ್ರಸಾದ್ ಶೆಟ್ಟಿ 2000ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಹಿತ ದಿನಸಿ ವಸ್ತುಗಳ ಕಿಟ್ ಒದಗಿಸಿದ್ದು, ಇದಕ್ಕೆ ಯುಪಿಸಿಎಲ್ ಸಂಸ್ಥೆ ಕೂಡ ಡಾ. ದೇವಿಪ್ರಸಾದ್ ಶೆಟ್ಟಿಯವರ ಮನವಿಯ ಮೇರೆಗೆ 100 ಕಿಟ್ ಗಳನ್ನು ನೀಡಿ ಸಹಕರಿಸಿತ್ತು. ಯುಪಿಸಿಎಲ್ ನೀಡಿದ್ದ ಬ್ಯಾಗ್ಗಳಲ್ಲಿ ಸಂಸ್ಥೆಯ ಹೆಸರಿದ್ದು, ಅದರ ಮತ್ತೊಂದು ಬದಿಯಲ್ಲಿ ಡಾ ದೇವಿಪ್ರಸಾದ್ ಶೆಟ್ಟಿ ಅವರ ಚಿತ್ರವಿರುವ ಮತ್ತು ಮನೆಯಲ್ಲಿರಿ ಜಾಗೃತರಾಗಿರಿ ಎಂಬ ಕೋರೋನ ಜಾಗೃತಿ ಸಂದೇಶದ ಸ್ಟಿಕರ್ ಅಂಟಿಸಿ ವಿತರಿಸಲಾಗಿತ್ತು. ಆದರೆ ದೇವಿಪ್ರಸಾದ್ ಶೆಟ್ಟಿಯವರ ಜನಸೇವೆಯನ್ನು ನಿರ್ಲಕ್ಷಿಸಿರುವ ಕಿಡಿಗೇಡಿಗಳು, ಯುಪಿಸಿಎಲ್ ಹೆಸರಿನ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ಫೋಟೋ ಇರುವ ಜಾಗೃತಿ ಸಂದೇಶದ ಸ್ಟಿಕ್ಕರನ್ನು ಅಂಟಿಸಿ, ಅದನ್ನು ಹರಿದು ತೆಗೆಯುವ ವಿಡಿಯೋ ಚಿತ್ರೀಕರಿಸಿ ಸೋಶಿಯಲ್ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರ ಘನತೆಗೆ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಜಹೀರ್ ಅಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ. |