ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್: ನಾಳೆ ಪ್ರಮಾಣ ವಚನ – ಯಾರಿಗೆ ಲಕ್? ಯಾರಿಗೆ ಕೊಕ್?
ಬೆಂಗಳೂರು: ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು, ಆಕಾಂಕ್ಷಿಗಳ ಆಸೆ ಮತ್ತಷ್ಟು ಗರಿಗೆದರಿದೆ.
ನಾಳೆ ಸಂಜೆ ಅಂದರೆ ಬುಧವಾರ ಸಾಯಂಕಾಲ 4 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದೇನೆ. ನೂತನ ಸಚಿವರಿಗೆ ಮಂಗಳವಾರ ಸಂಜೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಗೊಂದಲ ಇಲ್ಲ, ಈ ಬಗ್ಗೆ ಇರುವ ಊಹಾಪೋಹಗಳು ಸತ್ಯಕ್ಕೆ ದೂರವಾಗಿದೆ ಎಂದು ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಖಾಲಿಯಿರುವ 7 ಸಚಿವ ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಶಾಸಕರ ಹೆಸರು ಫೈನಲ್ ಆಗಿದ್ದು ಉಳಿದ ಒಂದು ಸ್ಥಾನಕ್ಕಾಗಿ ಅರವಿಂದ ಲಿಂಬಾವಳಿ ಮತ್ತು ಸಿಪಿ ಯೋಗೇಶ್ವರ್ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಇದೇ ವೇಳೆ ಹಲವು ಸಚಿವರಿಗೆ ಕೊಕ್ ನೀಡಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ