ಉಡುಪಿ: ಮಹಿಳೆಯ ಗೂಡಂಗಡಿ ಏಕಾಏಕಿ ಕಿತ್ತೆಸೆದ ಕಟ್ಟಡ ಮಾಲಕ, ಸಾರ್ವಜನಿಕರ ಆಕ್ರೋಶ
ಉಡುಪಿ: ನಗರದಲ್ಲಿ ಜನ ಸಾಮಾನ್ಯರಿಗೆ ಒಂದು ನ್ಯಾಯ ಹಣವಂತರಿಗೆ ಇನ್ನೊಂದು ನ್ಯಾಯ ಎಂದು ಮತ್ತೆ ತೋರಿಸಿಕೊಟ್ಟಿದೆ.
ನಗರದ ಮೆಸ್ಕಾಂ ಕಛೇರಿ ಎದುರು ಮಹಿಳೆಯೊರ್ವರು ಹಲವಾರು ವರ್ಷಗಳಿಂದ ಸುಣ್ಣ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇವರ ಗೂಡಂಗಡಿಯನ್ನು ಇಲ್ಲಿನ ಕಟ್ಟಡ ಮಾಲಕರು ಅವರಿಗೆ ತಿಳಿಸದೆ ಏಕಾಏಕಿ ಎತ್ತಂಗಡಿ ಮಾಡಿದ್ದಾರೆ.
ಉದ್ಯಾವರದ ವನಿತ ಎಂಬ ಮಹಿಳೆ ನಗರದಲ್ಲಿ ಸುಮಾರು ನಲ್ವತ್ತು ವರ್ಷಗಳಿಂದ ಸುಣ್ಣ ಮಾರಾಟ ಮಾಡಿ ತನ್ನ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇಂದು ಇವರ ಗೂಡಂಗಡಿ ಪಕ್ಕದ ಕಟ್ಟಡ ಮಾಲೀಕರು ತಮ್ಮ ವ್ಯವಹಾರ ಉದ್ದೇಶಕ್ಕಾಗಿ ನಿರ್ಮಿಸಿದ್ದ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಿಸುವುದಕ್ಕಾಗಿ ಈ ಮಹಿಳೆಯ ಗೂಡಂಗಡಿಯನ್ನು ಅವರಿಗೆ ತಿಳಿಸದೆ ಸ್ಥಳಾಂತರಿಸಿದ್ದಾರೆ.
ಇದರ ಮಾಹಿತಿ ಪಡೆದ ವನಿತ ಅವರು ಸ್ಥಳಕ್ಕಾಗಮಿಸಿ ನೋಡುವಾಗ ಗೂಡಂಗಡಿಯನ್ನು ಸ್ಥಳಾಂತರವಾಗಿತ್ತು. ಈ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತರು ವನಿತರಿಗೆ ಆದ ಅನ್ಯಾಯದ ಬಗ್ಗೆ ಕಟ್ಟಡ ಮಾಲಕರಲ್ಲಿ ವಿಚಾರಿಸಿದ್ದಾರೆ. ನಂತರ ಮಹಿಳೆ ಪರ ನೂರಾರು ಸಾರ್ವಜನಿಕರು ನಿಂತಿದ್ದರು. ಮಾಹಿತಿ ತಿಳಿದ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ವ್ಯವಹಾರ ಉದ್ದೇಶಕ್ಕಾಗಿ ಉಪಯೋಗಿಸುವ ಕಟ್ಟಡಕ್ಕೆ ಮೊದಲೇ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆವರಣ ಗೋಡೆ ನಿರ್ಮಿಸಲು ನಗರ ಸಭೆ ಯಾವುದೇ ಅನುಮತಿ ನೀಡಲು ಬರುವುದಿಲ್ಲ, ಇಂದು ರಜಾ ದಿನವಾದ್ದರಿಂದ ಕಟ್ಟಡ ಮಾಲೀಕರು ಯಾವುದೇ ಪರವಾನಿಗೆ ಪಡೆಯದೇ ಆವರಣ ಗೋಡೆ ನಿರ್ಮಿಸಲು ಹೊರಟಿದ್ದಾರೆಂದು ಸ್ಥಳೀಯರು ದೂರಿದ್ದಾರೆ.