ಕಾರಿನಲ್ಲಿ ಒಂಟಿಯಾಗಿ ಸಾಗುತ್ತಿದ್ದರೆ ಮಾಸ್ಕ್ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ
ನವದೆಹಲಿ: ಕಾರಿನಲ್ಲಿ ಒಂಟಿಯಾಗಿ ಸಾಗುತ್ತಿದ್ದರೆ ಮುಖಗವಸು ಧರಿಸುವ ಕುರಿತು ತಾನು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ತಮ್ಮ ಕಾರ್ ನಲ್ಲಿ ಒಂಟಿಯಾಗಿ ಸಾಗುತ್ತಿದ್ದಾಗ ಮುಖಗವಸು ಧರಿಸದಿದ್ದಕ್ಕಾಗಿ 500 ರೂ. ದಂಡ ವಿಧಿಸಿರುವುದನ್ನು ಪ್ರಶ್ನಿಸಿ ವಕೀಲರಾದ ಸುರಭ್ ಶರ್ಮಾ ಸಲ್ಲಿಸಿದ್ದ ಮನವಿ ಅರ್ಜಿಗೆ ಸಂಬಂಧಿಸಿ ಸರ್ಕಾರ ಅಫಿಡವಿಟ್ ಮೂಲಕ ಈ ಮಾಹಿತಿ ನೀಡಿದೆ.
ಸಾರ್ವಜನಿಕವಾಗಿ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ 10 ಲಕ್ಷ ರೂ. ಪರಿಹಾರವನ್ನು ಸುರಭ್ ಶರ್ಮಾ ಕೋರಿದ್ದಾರೆ.ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಹೊರಡಿಸಲಾದ ದೆಹಲಿ ಸಾಂಕ್ರಾಮಿಕ ರೋಗಗಳ (ಕೋವಿಡ್ -19 ನಿರ್ವಹಣೆ) ನಿಯಂತ್ರಣದಂತೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಮೊದಲ ಬಾರಿಗೆ 500 ರೂ. ಪದೇ ಪದೇ ಉಲ್ಲಂಘಿಸಿದರೆ 1,000 ರೂ. ದಂಡ ವಿಧಿಸಲು ಅವಕಾಶವಿದೆ.
ಎಲ್ಲಾ ಸಾರ್ವಜನಿಕ ಸ್ಥಳಗಳು ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಮುಖಗವಸು ಧರಿಸುವುದು ಕಡ್ಡಾಯವಾಗಿದೆ.ಇದೇ ಅಂಶಗಳನ್ನು ಪ್ರಸ್ತಾಪಿಸಿರುವ ಸುರಭ್ ಶರ್ಮಾ ಅವರು, ಸಾರ್ವಜನಿಕ ಸ್ಥಳದಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಮುಖಗವಸು ಧರಿಸಬೇಕು ಎಂದು ಮಾರ್ಗಸೂಚಿಗಳು ಮಾತ್ರ ಹೇಳುತ್ತವೆ ಎಂದು ವಾದಿಸಿದ್ದಾರೆ.
ಆರೋಗ್ಯವು ರಾಜ್ಯ ವಿಷಯವಾಗಿದೆ ಮತ್ತು ಆದ್ದರಿಂದ, ಸದ್ಯದ ವಿಷಯ ಮೇಲ್ನೋಟಕ್ಕೆ ದೆಹಲಿ ಸರ್ಕಾರಕ್ಕೆ ಸಂಬಂಧಿಸಿರುವುದರಿಂದ ಈ ವಿಷಯದಲ್ಲಿ ತನ್ನ ಹೆಸರನ್ನು ತೆಗೆದುಹಾಕುವಂತೆ ನ್ಯಾಯಾಲಯಕ್ಕೆ ಆರೋಗ್ಯ ಸಚಿವಾಲಯ ಮನವಿ ಮಾಡಿದೆ.