ಪರ್ಕಳ: ಕಲುಷಿತ ನೀರು ತೆರೆದ ಪ್ರದೇಶಕ್ಕೆ, ಸ್ಥಳೀಯರ ದೂರಿಗೆ ಸ್ಪಂದಿಸದ ಅಧಿಕಾರಿಗಳು

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಅರಂಭಗೊಂಡಾಗಿನಿಂದ  ಉಡುಪಿ ಜಲ್ಲೆ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಿ ಉಡುಪಿ ನಗರವನ್ನು ಸ್ವಚ್ಚವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರ ಪರಿಣಾಮವೇ ಉಡುಪಿಗೆ  ಸ್ವಚ್ಛ ಉಡುಪಿ ಎಂಬ ಹಣೆ ಪಟ್ಟಿಯೂ ಸಿಕ್ಕಿತು ಆದರೆ, ದಿನಗಳು ಕಳೆದಂತೆ ನಗರದ ಹಲವೆಡೆ ಅಲ್ಲಲ್ಲಿ ಕಸದ ರಾಶಿಗಳು ಕಾಣ ಸಿಗುವುದು ಸಾಮಾನ್ಯವಾಗಿ  ಬಿಟ್ಟಿದೆ. ಇದನ್ನೆಲ್ಲಾ  ನೋಡಿದಾಗ ಸ್ವಚ್ಚತೆಯಿಂದ ನಾವೆಲ್ಲಾ ವಿಮುಖರಾಗುತ್ತಿದ್ದೆವೇನೋ ಎಂದೆನಿಸುತ್ತದೆ.

ಇದಕ್ಕೆ ನಿದರ್ಶನವೆಂಬಂತೆ ಅಪಾರ್ಟ್ಮೆಂಟ್ ‌ಗಳ ಮಾಲೀಕರು ಹೊರ ಬಿಡುವ ಕಲುಷಿತ ನೀರಿನ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಪರ್ಕಳದ ಮಂಜುನಾಥ್ ನಗರ ಬಡಾವಣೆಯಲ್ಲಿ ಫ್ಲ್ಯಾಟ್ ಸಮುಚ್ಚಯವೊಂದರ ಪಕ್ಕದ ಕಲುಷಿತ ನೀರು ತೆರೆದ ಪ್ರದೇಶಕ್ಕೆ ಬಿಡಲಾಗುತ್ತಿದೆ. ಇದರ ಪರಿಣಾಮ ಅಕ್ಕಪಕ್ಕದ ಮನೆಯವರು ಈ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಕಲುಷಿತ ನೀರು ಸ್ಥಳೀಯ ನಿವಾಸಿಗರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದ್ದು, ಆತಂಕದಲ್ಲಿದ್ದಾರೆ ಸ್ಥಳೀಯರು. ಇನ್ನು ಉಡುಪಿ ನಗರಸಭಾ ಅಧ್ಯಕ್ಷರ ವಾರ್ಡ್ನಲ್ಲೇ ಈ ರೀತಿ ಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟವೇ ಸರಿ. ಈ ಬಗ್ಗೆ ಸ್ಥಳೀಯರು ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ.

ಇದಕ್ಕೆ ರಾಜಕೀಯ ಒತ್ತಡವೇ ಪ್ರಮುಖ ಕಾರಣ ಎಂದು ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಊರಿನ ಲೋಕಸಭಾ ಸದಸ್ಯರು , ಶಾಸಕರು, ನಗರಸಭಾ ಸದಸ್ಯರು ಮಾಡಿದಂತಹ ಸ್ವಚ್ಚತಾ ಕಾರ್ಯಗಳಿಗೆ ಇಲ್ಲಿ ತದ್ವಿರುದ್ಧವಾಗಿ ಈ ಕಾರ್ಯ ಪರಿಸರ ಮಾಲಿನ್ಯವನ್ನುಂಟು ಮಾಡುತ್ತಿದೆ. ಇನ್ನಾದರೂ ಉಡುಪಿ ನಗರದ ಆರೋಗ್ಯವನ್ನು ಹಾಳು ಮಾಡುವ, ಸ್ವಚ್ಛತೆ ಮತ್ತು ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ನಗರಸಭೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ನಿರೀಕ್ಷೆಯಲ್ಲಿ ಇಲ್ಲಿನ ಸ್ಥಳೀಯರು ದಿನ ದೂಡುತ್ತಿದ್ದಾರೆ.

ಇಷ್ಟಲ್ಲದೆ ಉಡುಪಿ ನಗರ ಭಾಗದ ಉಡುಪಿಯ ಕಲ್ಸಂಕ, ಬೈಲಕೆರೆ, ಬನ್ನಂಜೆ, ಮಠದಬೆಟ್ಟು , ಮೂಡನಿಡಂಬೂರು ಈ ಭಾಗದಲ್ಲೂ ಅಪಾರ್ಟ್ಮೆಂಟ್ ಗಳ ಕಲುಷಿತ ನೀರಿನಿಂದ ಇಲ್ಲಿನ ಬಾವಿಗಳ ನೀರೂ ಕಲುಷಿತಗೊಂಡಿದ್ದು, ನೀರು ನಿತ್ಯ ಬಳಕೆಗೆ ಉಪಯೋಗಿಸದಂತಾಗಿದೆ. ಇದೀಗ ಈ ಭಾಗದ ಜನರು ನಗರ ಸಭೆಯ ನೀರನ್ನೇ ಅವಲಂಬಿಸುವಂತಾಗಿದೆ.  ಇನ್ನೂ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದಿರುವುದು ನಗರದ  ಹೊರ ಭಾಗದಲ್ಲೂ ಇದೇ ರೀತಿ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ  ಸಾರ್ವಜನಿಕ ವಲಯದಲ್ಲಿ  ಕೇಳಿಬರುತ್ತಿದೆ. 

Leave a Reply

Your email address will not be published. Required fields are marked *

error: Content is protected !!