ತಮ್ಮೊಳಗಿನ ಗೊಂದಲ ಮುಚ್ಚಿಡಲು ಬಿಜೆಪಿ ವಿರುದ್ಧ ಕಾಂಗ್ರೆಸ್ ಅನಗತ್ಯ ಆರೋಪ: ಶೋಭಾ ಕರಂದ್ಲಾಜೆ

ಮಂಗಳೂರು: ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ನಾಯಕರು ಬಿಜೆಪಿ ಹಾಗೂ ಸರಕಾರದ ನಾಯಕರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದ.ಕ. ಜಿಲ್ಲೆಯ ಕಂಕನಾಡಿ ಗರೋಡಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರಕಾರದ ಅಭಿವೃದ್ಧಿ ಕೆಲಸಗಳಿಂದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ. ಹಾಗಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ನಾಯಕರು ಬಿಜೆಪಿ ಹಾಗೂ ನಾಯಕರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದು, ಇದ್ಯಾವುದಕ್ಕೂ ಮಹತ್ವವಿಲ್ಲ. 50 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿದೆ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.

ಹಿಂದೆ ಜನರನ್ನು ಮರಳು ಮಾಡಬಹುದಿತ್ತು. ಆದರೆ ಈಗ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿವೆ. ಜನ ಬುದ್ಧಿವಂತರಾಗಿದ್ದಾರೆ. ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್‌ನಲ್ಲಿ ಗೊಂದಲ ಇದೆ ಎಂದ ಅವರು, ಬಿಜೆಪಿಯ ಕಾರ್ಯ ವೈಖರಿಯನ್ನು ಡಿಕೆಶಿ ಅನುಕರಿಸಲು ಹೊರಟಿದ್ದಾರೆ ಆದರೆ ಅವರಿಗೆ ಜನ, ಕಾರ್ಯಕರ್ತರು ಸೇರಿ ಸ್ವತಃ ಸಿದ್ದರಾಮಯ್ಯನವರೇ ಬೆಂಬಲ ನೀಡುತ್ತಿಲ್ಲ. ಆದ್ದರಿಂದ ತಮ್ಮೊಳಗಿನ ಗೊಂದಲ ಮುಚ್ಚಿಡಲು ಬಿಜೆಪಿ ಹಾಗೂ ಸರಕಾರದ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರ ಎಂದರು.

ಇದೇ ವೇಳೆ ಮಾತು ಮುಂದು ವರಿಸಿದ ಅವರು, ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿ, ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಈ ಎಲ್ಲಾ ನಾಟಕವನ್ನು ಸಿದ್ದರಾಮಯ್ಯ ಮಾಡುತಿದ್ದಾರೆ, ಆದರೆ ಹಿಂದೂಗಳ, ಕೊಡವರ ಭಾವನೆಗೆ ಧಕ್ಕೆ ತರುವ ಯಾವುದೇ ಹಕ್ಕು ಅವರಿಗಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!