ಕೆಂಪು ಕಲ್ಲು ಗಣಿಗಾರಿಕೆಗೆ 15 ದಿನಗಳೊಳಗೆ ಅನುಮತಿ: ಸಚಿವ ಸಿ.ಸಿ ಪಾಟೀಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟ್ಟಾ ಭೂಮಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ 250 ಮಂದಿಗೆ ಪರಿಶೀಲನೆ ನಡೆಸಿ, 15 ದಿನಗಳೊಳಗೆ ಅನುಮತಿ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಭವನದಲ್ಲಿ ಗುರುವಾರ ಉಡುಪಿ ಮತ್ತು ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಆದರೆ, ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿ
ದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಟ್ಟಾ ಭೂಮಿಗೆ ಅರ್ಜಿ ಸಲ್ಲಿಸಿದರೆ, ನಿಯಮಾವಳಿ ಪ್ರಕಾರ ಪರಿಶೀಲಿಸಿ ಪರವಾನಗಿ ನೀಡಲಾಗುವುದು. ಅವರಿಂದ ಕಾನೂನು ಪ್ರಕಾರ ರಾಜಸ್ವ ವಸೂಲು ಮಾಡಲಾಗುವುದು. ಆದರೆ, ಇದು ಕೆಂಪು ಕಲ್ಲು ತೆಗೆಯಲು ಪರವಾನಗಿಯೇ ಹೊರತು, ಮಣ್ಣು ತೆಗೆದು ಸಾಗಾಟ ಮಾಡುವಂತಿಲ್ಲ. ಅಲ್ಲದೇ, ಕಲ್ಲು ತೆಗೆದ ಗುಂಡಿಗಳನ್ನು ಮಣ್ಣಿನಿಂದ ಮುಚ್ಚದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅಕ್ರಮ ಕಲ್ಲು, ಬಾಕ್ಸೈಟ್‌ ಗಣಿಗಾರಿಕೆ ಹಾಗೂ ಸಾಗಾಟ ನಡೆಯುತ್ತಿವೆ ಎಂಬ ದೂರುಗಳು ಬಂದಿವೆ. ಇದನ್ನು ಪರಿಶೀಲಿಸಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಕ್ರಮ ಸಾಗಾಟಕ್ಕೂ ನಿರ್ಬಂಧ ಹೇರಲಾಗಿದೆ. ಅದಕ್ಕಾಗಿ ಜಿಲ್ಲೆಯ ಗಡಿ ತಪಾಸಣಾ ಕೇಂದ್ರಗಳಲ್ಲಿ 196 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ವಿವರಿಸಿದರು.

‘ದಕ್ಷಿಣ ಕನ್ನಡದ ಶಂಭೂರು, ಆದ್ಯಪಾಡಿ ಹಾಗೂ ತುಂಬೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಹೂಳೆತ್ತಲು ಅನುಮತಿ ನೀಡಲು ಸಭೆ ನಿರ್ಧರಿಸಿದೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಸೂಚನೆ ನೀಡಲಾಗಿದೆ. ಮರಳು ಗಣಿಗಾರಿಕೆಯಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಮತ್ತಿತರ ನಿಯಮಾವಳಿಯ ಪಾಲನೆ ಕಡ್ಡಾಯವಾಗಿದೆ’ ಎಂದು ಮಾಹಿತಿ ನೀಡಿದರು. 

‘ಸಿಆರ್‌ಝಡ್ ವ್ಯಾಪ್ತಿಯಲ್ಲಿ 104 ಕುಟುಂಬಗಳು ಸಾಂಪ್ರದಾಯಿಕವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಇಲ್ಲಿನ ಕುಟುಂಬಗಳ ಸಂಖ್ಯೆ ಹೆಚ್ಚಿದ ಕಾರಣ ಪರವಾನಗಿಯನ್ನೂ ಹೆಚ್ಚಿಸಲಾಗುವುದು’ ಎಂದರು.

ಕ್ರಷರ್‌: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ 60 ಕ್ರಷರ್‌ಗಳ ಮರು ಆರಂಭಕ್ಕೆ ಪರಿಶೀಲಿಸಿ ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 37 ಕ್ರಷರ್‌ ಮರು ಆರಂಭಗೊಂಡಿದೆ. ಮರಳು ಅಥವಾ ಕೆಂಪು ಕಲ್ಲುಗಳ ಗಣಿಗಾರಿಕೆಯಿಂದ ರಸ್ತೆ ಹದಗೆಟ್ಟಿದ್ದರೆ, ಅದಕ್ಕಾಗಿ ಮೀಸಲು ಇರುವ ಅನುದಾನದಲ್ಲಿ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ಅವರು ತಿಳಿಸಿದರು.

ಶಾಸಕರಾದ ರಾಜೇಶ್‌ ನಾಯ್ಕ್, ಡಾ.ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್, ಸುನೀಲ್‌ ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಗದೀಶ್, ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಹೂಳಿನ ಹೆಸರಲ್ಲಿ ಮರಳು ಎತ್ತುವಳಿ?

ಅಣೆಕಟ್ಟೆ ಮತ್ತು ಇತರ ಪ್ರದೇಶಗಳಲ್ಲಿ ಹೂಳೆತ್ತಲು ಗಣಿ ಮತ್ತು ಭೂವಿಜ್ಞಾನ ಸಚಿವರ ನೇತೃತ್ವದ ಸಭೆ ಅನುಮತಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ‘ಹೂಳಿ’ನ ಹೆಸರಲ್ಲಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿಸಿದರೇ? ಎಂಬ ಪ್ರಶ್ನೆ ಕೇಳಿಬಂದಿದೆ.

‘ಈ ಹಿಂದೆ ಜಲಸಂಪನ್ಮೂಲ ಅಥವಾ ಸಣ್ಣ ನೀರಾವರಿ ಇಲಾಖೆಗಳು ಹೂಳೆತ್ತುವ ನಿರ್ಧಾರ ಕೈಗೊಳ್ಳುತ್ತಿದ್ದವು. ಆದರೆ, ಹೊಸ ಮರಳು ನೀತಿಯ ಬಳಿಕ ಗಣಿ ಮತ್ತು ಭೂ ವಿಜ್ಞಾನ ಸಚಿವಾಲಯವೂ ಅನುಮತಿಸಬಹುದಾಗಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

‘ಮರಳು ಮಾಫಿಯಾಗೆ ಬ್ರೇಕ್‌’

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತೀವ್ರವಾಗಿ ಹೆಚ್ಚಿತ್ತು. ಅಲ್ಲದೇ, ಸುಮಾರು 800 ಕಡೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ಬಳಿಕ ಇದನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಕಾನೂನು ಮೂಲಕ 250 ಮಂದಿಗೆ ಪರವಾನಗಿ ನೀಡಲಾಗುವುದು. ನಮ್ಮ ಸರ್ಕಾರವು ಅಕ್ರಮಗಳಿಗೆ ಬ್ರೇಕ್‌ ಹಾಕಿ ₹ 2 ಸಾವಿರದಲ್ಲಿ ಮರಳನ್ನು ನೀಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದರು. ಕೇರಳಕ್ಕೆ ಅಕ್ರಮವಾಗಿ ಮರಳು, ಕೆಂಪು ಕಲ್ಲುಗಳನ್ನು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!