ಉಡುಪಿ: ಅನುಮಾನಾಸ್ಪದವಾಗಿ ಸತ್ತ ಪಕ್ಷಿ, ಪ್ರಾಣಿಗಳ ಮಾಹಿತಿ ನೀಡಲು ಮನವಿ
ಉಡುಪಿ, ಜನವರಿ 8: ಜಿಲ್ಲೆಯಲ್ಲಿ ಯಾವುದೇ ರೀತಿಯ ಪಕ್ಷಿಗಳಲ್ಲಿ ಇದುವರೆಗೆ ಹಕ್ಕಿಜ್ವರದ
ಸೋಂಕು ಕಂಡು ಬಂದಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಹಕ್ಕಿಜ್ವರದ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಆದರೆ ಹಕ್ಕಿ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಕ್ಕಿ ಜ್ವರದ ಕುರಿತು ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು. ಹಕ್ಕಿ ಜ್ವರವು ಕೇರಳ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಕಂಡುಬoದಿದೆ ಎಂದು ವರದಿಯಾದ ಹಿನ್ನಲೆಯಲ್ಲಿ
ಸಾರ್ವಜನಿಕರು ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಪಶುಪಾಲನೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಕೋಳಿ ಫಾರಂಗಳಿಗೆ ಭೇಟಿ ನೀಡಿ ಕೋಳಿಗಳ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಡಿಸಿ ಸೂಚಿಸಿದರು.
ಹಕ್ಕಿ ಜ್ವರವು ವೈರಾಣುವಿನಿಂದ ಕಾಣಿಸಿಕೊಳ್ಳಲಿದ್ದು, ಈ ಸೋಂಕುಗಳಿಗೆ ಮಕ್ಕಳು ಹಾಗೂ ವಯಸ್ಕರು ಹೆಚ್ಚಾಗಿ ಒಳಗಾಗುತ್ತಾರೆ. ಸೋಂಕಿನಿoದ ಜ್ವರ, ಶೀತ, ತಲೆನೋವು, ಮೈಕೈನೋವು, ಗಂಟಲು ನೋವು, ಕೆಮ್ಮು, ಉಸಿರಾಟದ ತೊಂದರೆಗಳು ಕಂಡು ಬರುತ್ತದೆ. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಉಪಯೋಗಿಸುವ ಮೊದಲು ಚೆನ್ನಾಗಿ
ಬೇಯಿಸಿ ತಿನ್ನಬೇಕು. ರೋಗ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ, ಸ್ಯಾನಿಟೈಸ್, ಮಾಸ್ಕ್ ಬಳಕೆ ಅಗತ್ಯ ಎಂದರು.
ಪಶುಪಾಲನಾ ಇಲಾಖೆಯ ಅಧಿಕಾರಿಗಳು ಪ್ರತಿದಿನ ಕೋಳಿ ಫಾರಂಗಳಲ್ಲಿನ ಕೋಳಿಗಳ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಅದನ್ನು ಬೆಂಗಳೂರಿನ ತಪಾಸಣಾ ಕೇಂದ್ರಕ್ಕೆ ಕಳುಹಿಸಿ, ಅದರ ತಪಾಸಣಾ ಫಲಿತಾಂಶದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ವ್ಯಾಪ್ತಿಯಲ್ಲಿ ಪಕ್ಷಿಗಳ ಸಾವು ಸಂಭವಿಸಿದ್ದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕೂಡಲೇ ಮಾಹಿತಿ ನೀಡಬೇಕು. ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಕ್ಕಿಜ್ವರದ ಕುರಿತು ಕರಪತ್ರ ವಿತರಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಡಿಸಿ ಸೂಚಿಸಿದರು.
ಸಾರ್ವಜನಿಕರು ಹಕ್ಕಿಜ್ವರ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಸುದ್ದಿಗಳನ್ನು ನಂಬದoತೆ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಗೆ ಹೊರರಾಜ್ಯದಿಂದ ಕೋಳಿಗಳ ಸಾಗಾಟ ಬರುವುದಿಲ್ಲ. ಆದ್ದರಿಂದ ಕೋಳಿಮಾಂಸ ಸೇವನೆಗೆ ಯಾವುದೇ ಸಮಸ್ಯೆಯಿಲ್ಲ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಕೋಳಿಗಳನ್ನು ಸರಬರಾಜು ಮಾಡಿ ಬರುವ, ಖಾಲಿ
ವಾಹನಗಳನ್ನು ಸ್ಯಾನಿಟೈಸ್ ಮಾಡಿ, ಚಾಲಕ-ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಬೇಕು. ಅಂತರ್ ಜಿಲ್ಲಾ ಕೋಳಿ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಜಿ.ಜಗದೀಶ್ ತಿಳಿಸಿದರು.
ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಅನುಮಾನಾಸ್ಪದವಾಗಿ ಸತ್ತ ಪಕ್ಷಿ, ಪ್ರಾಣಿಗಳು ಕಂಡು ಬಂದರೆ, ಜಿಲ್ಲಾ ಕಂಟ್ರೋಲ್ ರೂಮ್ ನಂಬರ್ 0820-2534024 ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ವೆಕ್ಷಣಾದಿಕಾರಿ ಡಾ. ವಾಸುದೇವ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಹರೀಶ್ ತಮನಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.