ನರ್ಮ್ ಬಸ್ ಶಾಶ್ವತ ಸ್ಥಗಿತಕ್ಕೆ ಹುನ್ನಾರ: ಉಡುಪಿ ಬ್ಲಾಕ್ ಕಾಂಗ್ರೆಸ್ ಆರೋಪ

ಉಡುಪಿ: ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಾಗ ಖಾಸಗಿ ಬಸ್ ಮಾಲಕರ ಲಾಬಿಯನ್ನು ಎದುರಿಸಿ ವಿದ್ಯಾರ್ಥಿಗಳಿಗೆ, ನಿತ್ಯ ಪ್ರಯಾಣಿಕರಿಗೆ ಮಿತದರದಲ್ಲಿ ಬಸ್‌ನಲ್ಲಿ ಸಂಚರಿಸಲು ಪರಿಸರ ಸ್ನೇಹಿ ಹಸಿರು ಬಣ್ಣದ ನರ್ಮ್ ಬಸ್‌ಗಳನ್ನು ಉಡುಪಿಯಲ್ಲಿ ಪ್ರಾರಂಭಿಸಿದ್ದರು.

ಕೋವಿಡ್-19 ಲಾಕ್‌ಡೌನ್‌ನಿಂದ ಸುಮಾರು 2 ತಿಂಗಳು ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಮುಕ್ತ ಆದರೂ ಜಿಲ್ಲಾಡಳಿತ ಹಾಗೂ ಶಾಸಕರು ಖಾಸಗಿ ಬಸ್ಸಿನ ಮಾಲಕರ ಲಾಬಿಯಿಂದ ನರ್ಮ್ ಬಸ್ಸನ್ನು ನಿಗದಿತ ಮಾರ್ಗದಲ್ಲಿ ಇನ್ನೂ ಪ್ರಾರಂಭಿಸಿಲ್ಲ.

ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿಗಳ ಹಾಗೂ ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ ದರವನ್ನು ರದ್ಧುಗೊಳಿಸಲಾಗಿದೆ. ಅಲ್ಲದೆ 15% ಬಸ್ ದರವನ್ನು ಹೆಚ್ಚಿಸುವ ಮೂಲಕ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ನಾಗರೀಕರಿಗೆ ಹೊರೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ದರವನ್ನು ತೆರಿಗೆ ಸರಿಹೊಂದಿಸಲು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.

ನರ್ಮ್ ಬಸ್ ಬರುವಾಗ ಖಾಸಗಿ ಬಸ್ ಮಾಲಕರು, ಈಗಿನ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರು ಸರಕಾರಿ ಬಸ್‌ಗೆ ಪರವಾನಿಗೆ ತಡೆಯಲು ಶತಪ್ರಯತ್ನ ಮಾಡಿದ್ದರು. ಅವರೇ ಈಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಆದುದರಿಂದ ಖಾಸಗಿ ಲಾಬಿಯಿಂದ ಉಡುಪಿಯ ಜನೋಪಯೋಗಿ ನರ್ಮ್ ಬಸ್ ಶಾಶ್ವತ ಸ್ಥಗಿತಗೊಂಡರೆ ಆಶ್ಚರ್ಯಪಡಬೇಕಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಎಸ್.ಸಿ. ಸೆಲ್ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!