ಬೀಚ್ ನಲ್ಲಿ ಮದ್ಯಪಾನ: ‘ಆಪರೇಷನ್ ಸುರಕ್ಷ’ – ಕಾರ್ಯಾಚರಣೆ 70ಕ್ಕೂ ಹೆಚ್ಚು ಮಂದಿ ವಶಕ್ಕೆ
ಮಂಗಳೂರು: ನಗರದಲ್ಲಿ ಕೈಗೊಂಡಿರುವ ‘ಆಪರೇಷನ್ ಸುರಕ್ಷ’ದ ಅಂಗವಾಗಿ ಮಂಗಳೂರು ನಗರದ ಕಡಲ ತೀರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 70ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಸ್ಥಳೀಯರ ದೂರುಗಳ ಆಧಾರದ ಮೇಲೆ ನಾಲ್ಕು ಪ್ರಮುಖ ಕಡಲತೀರಗಳಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ, ಕಡಲ ತೀರದದಲ್ಲಿ ಅನೇಕರು ಮದ್ಯ ಸೇವಿಸಿ ಇತರರಿಗೆ ತೊಂದರೆ ನೀಡುತ್ತಿದ್ದುದು ಗಮನಕ್ಕೆ ಬಂದಿದೆ.
ಈ ವೇಳೆ ತೊಂದರೆ ಸೃಷ್ಟಿಸುತ್ತಿದ್ದ 70 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಹಲವಾರು ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಡಲ ಕಿನಾರೆಯಲ್ಲಿ ಇದ್ದವರ ಪೈಕಿ ಐದಾರು ಜನರನ್ನು ಹೊರತುಪಡಿಸಿ, ಉಳಿದೆಲ್ಲರೂ ಮದ್ಯ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.
ಮದ್ಯ ಸೇವಿಸಿದ್ದ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದ್ದು ಅವರ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ರೀತಿಯ ಅಪರಾಧಗಳು ಮತ್ತೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರಿಗೆ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಸಿಪಿ ಮತ್ತು ಡಿಸಿಪಿ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸುಮಾರು 20 ತಂಡಗಳು ಭಾಗಿಯಾಗಿದ್ದವು ಎಂದು ತಿಳಿದು ಬಂದಿದೆ.