ಉಡುಪಿ: ಕೋವಿಡ್ ಲಸಿಕೆ ಮೊದಲನೇ ಹಂತ 19,562 ಆರೋಗ್ಯ ಕಾರ್ಯಕರ್ತರಿಗೆ
ಉಡುಪಿ: ಜಿಲ್ಲೆಗೆ ಕೋವಿಡ್ ಲಸಿಕೆ ಬಂದಿದ್ದು , ಈ ಲಸಿಕೆಯನ್ನು ಯಾವ ರೀತಿ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಡ್ರೈ ರನ್ ಕಾರ್ಯಕ್ರಮವನ್ನು ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಗೆ ಬಂದಿರುವ ಕೋವಿಡ್ ಲಸಿಕೆಯನ್ನು ಯಾವ ರೀತಿ ನೀಡಬೇಕು ಹಾಗೂ ಲಸಿಕೆ ನೀಡುತ್ತಿರುವ ಸಂದರ್ಭದಲ್ಲಿ ಆಗುವ ಲೋಪ ದೋಷಗಳನ್ನು ಪರಿಶೀಲನೆ ನಡೆಸಿ ಅವುಗಳನ್ನು ಸರಿಪಡಿಸುವ ಸಲುವಾಗಿ ಡ್ರೈ ರನ್ ನಡೆಸಲಾಗುತ್ತಿದೆ. ಲಸಿಕೆಯನ್ನು ಮೊದಲನೇ ಹಂತ ಜಿಲ್ಲೆಯಲ್ಲಿರುವ 19,562 ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ.
2ನೇಹಂತದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ನಿರ್ಧರಿಸಿದ್ದು ಅವರುಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಇವರ ಪಟ್ಟಿ ರಚಿಸಿದ ಕೂಡಲೇ ಅವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದರೊಂದಿಗೆ ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ವರಿಗೆ ಹಾಗೂ 50 ವರ್ಷ ಕೆಳಗಿನವರಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರನ್ನು ಪಟ್ಟಿ ಮಾಡಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ವಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯ ಇಲ್ಲ.
ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮೂರು ಕೋಣೆಗಳನ್ನು ಆಯೋಜಿಸಲಾಹಿದ್ದು, ಮೊದಲನೇಯದಾಗಿ ವೈಟಿಂಗ್ ರೂಮ್,ವ್ಯಾಕ್ಸಿನೇಷನ್ ರೂಮ್ ಹಾಗೂ ಅಬ್ಸರ್ವೇಶನ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಮಾದರಿಯಲ್ಲಿ ಈ ಕಾರ್ಯ ಕೈಗೊಂಡು ಲಸಿಕೆ ಕಾರ್ಯಕ್ರಮ ವನ್ನು ಯಶಸ್ವಿಯಾಗಿ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಮೊದಲ ಹಾಗೂ ಎರಡನೇ ಹಂತದ ಲಸಿಕಾ ವಿತರಣೆ ಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದ್ದು ಲಸಿಕೆ ಪೂರೈಕೆ ಆದಂತೆ ವಿತರಣೆ ಮಾಡಲಾಗುತ್ತದೆ ಎಂದರು.
ಇನ್ನು ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ,ಸಮುದಾಯ ಅರೋಗ್ಯ ಕೇಂದ್ರ ಬ್ರಹ್ಮಾವರ , ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ಡಾ. ಟಿ.ಎಂ.ಎ ಪೈ ಆಸ್ಪತ್ರೆ ಉಡುಪಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಮತ್ತು ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಡ್ರೈರನ್ ನಡೆಯುತ್ತಿದೆ.
ಜಿಲ್ಲೆಯಲ್ಲಿ 105 ಸರಕಾರಿ ಆರೋಗ್ಯ ಸಂಸ್ಥೆಗಳು, 762 ಖಾಸಗಿ ಆರೋಗ್ಯ ಸಂಸ್ಥೆಗಳು ಸೇರಿ ಒಟ್ಟು 867 ಆರೋಗ್ಯ ಸಂಸ್ಥೆಗಳ 19,562 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಈ ಪೈಕಿ ಸರಕಾರಿ ಆತೋಗ್ಯ 5688 ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ 13874 ಅಸರೋಗ್ಯ ಕಾರ್ಯಕರ್ತ ರು ಫಲಾನುಭವಿಗಳು ಇದ್ದಾರೆ.