ಜ.9 ರಂದು ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ನವೀಕೃತ ಉಚ್ಚಿಲ ಶಾಖೆ, ನೂತನ ಎಟಿಎಂ ಉದ್ಘಾಟನೆ

ಉಡುಪಿ: ಕಳೆದ 43 ವರ್ಷಗಳಿಂದ ಸಹಕಾರಿ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಜನಸ್ನೇಹಿ ಸಹಕಾರಿ ಸಂಸ್ಥೆಯಾಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯವಹಾರ ನಡೆಸುತ್ತಾ ಕರಾವಳಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕಿನ ನವೀಕೃತ ಉಚ್ಚಿಲ ಶಾಖೆ ಹಾಗೂ ನೂತನ ಎ.ಟಿ.ಎಂ ಉದ್ಘಾಟನಾ ಸಮಾರಂಭ ಜನವರಿ 9 ರಂದು ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ.

ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಇದರ ಮುಖ್ಯ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ನವೀಕೃತ ಶಾಖೆಯ ಉದ್ಘಾಟನೆಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ನಿದೇರ್ಶಕರಾದ ಸತೀಶ್ ಕಾಶೀನಾಥ ಮರಾಠೆಯವರು ನೆರವೇರಿಸಲಿದ್ದಾರೆ. ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಸಹಕಾರ ಸಂಘಗಳ ನಿಬಂಧಕರಾದ ಎಸ್. ಜಿಯಾವುಲ್ಲಾ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಭಾಗವಹಿಸಲಿದ್ದು, ಬ್ಯಾಂಕಿನ ತುಳು ನಾಮ ಫಲಕವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್ ರವರು ಅನಾವಣಗೊಳಿಸಲಿದ್ದಾರೆ.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಸುರೇಶ್ ನಾಯಕ್ ಕುಯಿಲಾಡಿ, ಆನಂದ ಪಿ. ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಎಚ್ ಡಿ ಎಫ್ ಸಿ ಬ್ಯಾಂಕಿನ ಕ್ಲಸ್ಟರ್ ಹೆಡ್ ಚಿದಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಶಿಲ್ಪಾ ಜಿ. ಸುವರ್ಣ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿರಲಿದ್ದಾರೆ.

ಸಮಾರಂಭದಲ್ಲಿ ಕಾಪು ಪುರಸಭೆಯ ನೂತನ ಅಧ್ಯಕ್ಷರಾದ ಅನಿಲ್ ಕುಮಾರ್, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸುಧಾಮ ಶೆಟ್ಟಿ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಹಿರಿಯ ಅರ್ಚಕರಾದ ವೆಂಕಟ ನರಸಿಂಹ ಉಪಾಧ್ಯಾಯ, ರಾಜ್ಯ ಮೀನುಗಾರಿಕೆ ಇಲಾಖೆಯಿಂದ ನೀಡಲ್ಪಡುವ ಶ್ರೇಷ್ಠ ಮೀನುಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಹಿರಿಯ ಮೀನುಗಾರರಾದ ರಾಮ ಕಾಂಚನ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಣಾಮ್ ಕೆ ಸಾಲ್ಯಾನ್ ಮತ್ತು ಶ್ರೇಯಾ ಬಿ. ಕುಂದರ್ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.

ಕಳೆದ 11 ವರ್ಷದಿಂದ ನಿರಂತರವಾಗಿ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡುತ್ತಿರುವ ಕರಾವಳಿಯ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ಪ್ರಸ್ತುತ ಯಶ್‌ಪಾಲ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಉತ್ತಮ ಪ್ರಗತಿಯನ್ನು ದಾಖಲಿಸುತ್ತಿದೆ.

ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಮಂಗಳೂರು, ಹೆಜಮಾಡಿ, ಪಡುಉಚ್ಚಿಲ, ಉಡುಪಿ ಹಾಗೂ ಕುಂದಾಪುರ ಹೀಗೆ ಒಟ್ಟು 8 ಶಾಖೆಗಳನ್ನು ಹೊಂದಿದ್ದು, ಈಗಾಗಲೇ ೪ ಶಾಖೆಗಳಾದ ಮಲ್ಪೆ, ಮಂಗಳೂರು, ಕುಂದಾಪುರ, ಸುರತ್ಕಲ್ ಮತ್ತು ಆಡಳಿತ ಕಛೇರಿ ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದೆ.

ಪ್ರಸ್ತುತ ಬ್ಯಾಂಕಿನಲ್ಲಿ 22,248 ಸದಸ್ಯರಿದ್ದು, ಪಾಲು ಬಂಡವಾಳ ರೂ. 9.49 ಕೋಟಿ, ದುಡಿಯುವ ಬಂಡವಾಳ ರೂ. 260 ಕೋಟಿ, ಠೇವಣಿ ರೂ.224 ಕೋಟಿ, ಸಾಲ ಮತ್ತು ಮುಂಗಡ ರೂ.161.64 ಕೋಟಿಯಾಗಿದ್ದು, ಬ್ಯಾಂಕು ಲೆಕ್ಕ ಪರಿಶೋಧನೆಯಲಿ ಎ ಶ್ರೇಣಿಯಲ್ಲಿದ್ದು ಸಹಕಾರ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನವರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ.

ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಉಚ್ಚಿಲ ಶಾಖೆಯನ್ನು ನವೀಕರಿಸಿ ಆಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬ್ಯಾಂಕಿಂಗ್ ಸೇವೆಗಳಿಗೆ ಅತಿ ಅವಶ್ಯಕವೆನಿಸಿರುವ RTGS/NEFT, EBIX CASH (Western Union Money Transfer), E Stamping, Safe Deposit Locker, ATM, Mobile Banking, Health Card, Insurance, PMFSಸಾಮಾನ್ಯ ಸೇವಾ ಕೇಂದ್ರ ಸೌಲಭ್ಯಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನಿತರ ಆಧುನಿಕ ತಂತ್ರಜ್ಞಾನದ ಸೇವೆಯನ್ನು ಒದಗಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಂಗಳೂರಿನಲ್ಲಿಯೂ ಶಾಖೆಗಳನ್ನು ಆರಂಭಿಸುವ ಮೂಲಕ ವ್ಯವಹಾರ ವಿಸ್ತರಿಸುವ ಯೋಜನೆ ಕೂಡಾ ಆಡಳಿತ ಮಂಡಳಿಯ ಮುಂದಿದೆ.

ಮೀನುಗಾರ ಮಹಿಳಾ ಸ್ವ ಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರಸರಕಾರದ ಬಡವರ ಬಂಧು ಯೋಜನೆಯಡಿ ಬಡ್ಡಿರಹಿತ ಸಾಲ ಯೋಜನೆ ಮತ್ತು ಉಚ್ಚಿಲ ಶಾಖೆಯ ಉದ್ಘಾಟನೆಯ ಅಂಗವಾಗಿ (ಜ.15 ರವರೆಗೆ) ಠೇವಣಿಗಳ ಮೇಲೆ 0.5% ಹೆಚ್ಚುವರಿ ಬಡ್ಡಿ ಹಾಗೂ ಹೊಸ ಗ್ರಾಹಕರಿಗೆ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಮತ್ತು ಉಚಿತ ಎಟಿಎಮ್ ಕಾರ್ಡ್ ನೀಡುವ ಯೋಜನೆಯನ್ನು (ಜ.31ರವರೆಗೆ) ಹಮ್ಮಿಕೊಂಡಿದೆ ಮತ್ತು ಎಲ್ಲಾ ರೀತಿಯ ಸಾಲ ಸೌಲಭ್ಯ ಕಡಿಮೆ ಬಡ್ಡಿದರದಲ್ಲಿ ಲಭ್ಯವಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ನಿಟ್ಟಿನಲ್ಲಿ ಆಮಂತ್ರಣ ಪತ್ರಿಕೆ, ಬ್ಯಾನರ್ ಹಾಗೂ ಬ್ಯಾಂಕಿನಲ್ಲಿ ತುಳು ಲಿಪಿಯ ನಾಮ ಫಲಕ ಅಳವಡಿಸಲಾಗಿದ್ದು , ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್ ರವರು ಅನಾವಣಗೊಳಿಸಲಿದ್ದಾರೆಂದು ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ. ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!