ಅಂಬಲಪಾಡಿ: ಸಂಘಟಿತ ಪ್ರಯತ್ನದಿಂದ ಗೆಲುವು ಶತಸಿದ್ಧ – ರಾಘವೇಂದ್ರ ಕಿಣಿ

ಉಡುಪಿ: ಯಾವುದೇ ಚುನಾವಣೆಗಳಲ್ಲಿ ಸಂಘಟಿತರಾಗಿ ತೊಡಗಿಸಿಕೊಂಡಾಗ ಗೆಲುವು ಶತಸಿದ್ಧ ಎಂಬುದನ್ನು ಅಂಬಲಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಗ್ರಾಮ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್‌ನ ಒಟ್ಟು 19 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 17 ಸ್ಥಾನಗಳನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಕರಾವಳಿ ಪ್ರದೇಶವು ಗ್ರಾ.ಪಂ. ಮಟ್ಟದಲ್ಲೂ ಬಿಜೆಪಿಯ ಭದ್ರಕೊಟೆ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಹೇಳಿದರು.

ಅವರು ಡಿ.4ರಂದು ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್‌ನ ನೂತನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಸರಕಾರದಿಂದ ನೇರವಾಗಿ ಗ್ರಾಮ ಪಂಚಾಯತ್‌ಗಳಿಗೆ ಗರಿಷ್ಠ ಅನುದಾನ ಹರಿದು ಬರಲಿರುವ ಈ ಸುಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರ ಜವಾಬ್ದಾರಿಯೂ ಅಷ್ಟೇ ಪ್ರಾಮುಖ್ಯವಾಗಿದೆ. ಅತ್ಯಂತ ತಾಳ್ಮೆ ಸಂಯಮದಿಂದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ತ್ವರಿತ ಪರಿಹಾರ ಒದಗಿಸುವ ಜೊತೆಗೆ ಕಾರ್ಯಕರ್ತರೊಂದಿಗಿನ ಉತ್ತಮ ಬಾಂಧವ್ಯ ಕೂಡಾ ಮಹತ್ವಪೂರ್ಣವಾಗಿದೆ. ಉಡುಪಿ ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯತ್ ಎನಿಸಿಕೊಂಡಿರುವ ಅಂಬಲಪಾಡಿ ಗ್ರಾಮ ಪಂಚಾಯತ್ ಗ್ರಾಮಸ್ಥರ ಜೀವನಾಡಿಯಾಗಿ ಸಾರ್ಥಕ ಸೇವೆಗೈದು ದಾಖಲೆಯ ಅಭಿವೃದ್ಧಿ ಸಾಧಿಸಲಿ ಎಂದು ಅವರು ಹಾರೈಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ರಾಜ್ಯ ಮೀನುಗಾರ ಪ್ರಕೋಷ್ಠದ ಸಂಚಾಲಕ ಯಶ್ಪಾಲ್ ಸುವರ್ಣ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯರು ಸಕ್ರಿಯರಾದಾಗ ಗ್ರಾಮದ ಅಭಿವೃದ್ಧಿ ಸಾಧ್ಯ. ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ ಜಿಲ್ಲೆಯಾದ್ಯಂತ ಶೇಕಡಾ 75ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಭರ್ಜರಿ ವಿಜಯ ದಾಖಲಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ವಿನೂತನ ಯೋಜನೆಗಳನ್ನು ಜನತೆಗೆ ತಲುಪಿಸುವ ಮೂಲಕ ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಸಾರ್ಥಕ ಜನಸೇವೆಗೈದು ನಿರಂತರ ಅಭಿವೃದ್ಧಿ ಚಟುವಟಿಕೆಗಳೊಂದಿಗೆ ಇತರರಿಗೆ ಮಾದರಿಯಾಗಲಿ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಪ್ರಸ್ತಾವಿಕವಾಗಿ ಮಾತನಾಡಿ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ಬಿಜೆಪಿ ವಿಜಯ ಯಾತ್ರೆ ಮುಂದುವರಿದಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯಂತೆ ನಡೆದ ಬೂತ್ ಮಟ್ಟದ ಪಂಚರತ್ನ ಸಮಿತಿ, ಪೇಜ್ ಪ್ರಮುಖ್, ಕುಟುಂಬ ಮಿಲನ, ಗ್ರಾಮ ಸ್ವರಾಜ್ಯ ಸಮಾವೇಶಗಳು ಗ್ರಾಮ ಪಂಚಾಯತ್ ಚುನಾವಣಾ ಗೆಲುವಿಗೆ ಪೂರಕ ವಾತಾವರಣ ಸೃಷ್ಠಿಸಿವೆ. ಗ್ರಾಮ ಪಂಚಾಯತ್ ಚುನಾವಣೆಯ ಉತ್ತಮ ಫಲಿತಾಂಶ ಮುಂದಿನ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಈಗಾಗಲೇ ದಾಖಲೆಯ ಅಭಿವೃದ್ಧಿಯ ಜೊತೆ ಮುನ್ನಡೆಯುತ್ತಿರುವ ಅಂಬಲಪಾಡಿ ಗ್ರಾಮ ಪಂಚಾಯತ್ ಇನ್ನಷ್ಟು ಸಾಧನೆಗಳೊಂದಿಗೆ ಜನಮಾನಸದಲ್ಲಿ ಹೊಸ ಬಾಷ್ಯ ಬರೆಯಲಿ ಎಂದರು.

ಬಿಜೆಪಿ ಜಿಲ್ಲಾ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಉಡುಪಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಬಿಜೆಪಿ ಅಂಬಲಪಾಡಿ-ಕಡೆಕಾರು ಮಹಾ ಶಕ್ತಿಕೇಂದ್ರದ ಸಂಚಾಲಕ ರಾಜೇಂದ್ರ ಪಂದುಬೆಟ್ಟು ಮತ್ತು ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವದ ಬೃಹತ್ ವಾಹನ ಜಾಥಾ ನಡೆಯಿತು.

Leave a Reply

Your email address will not be published. Required fields are marked *

error: Content is protected !!