ಬದಿಯಡ್ಕ: ಒಂದೂವರೆ ವರ್ಷದ ಮಗುವನ್ನು ಬಾವಿಗೆ ಎಸೆದು ಕೊಂದ ಹೆತ್ತಬ್ಬೆ!

ಕಾಸರಗೋಡು : ಒಂದೂವರೆ ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ತಾಯಿಯನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೆರ್ಲ ಕಾಟುಕುಕ್ಕೆ ಪೆರ್ಲತ್ತಡ್ಕದ ಶಾರದಾ (25) ಬಂಧಿತ ಆರೋಪಿ ಡಿ. 4 ರಂದು ಈಕೆಯ ಒಂದು ವರೆ ವರ್ಷದ ಮಗು ಸ್ವಸ್ತಿಕ್ ನಾಪತ್ತೆಯಾಗಿದ್ದ ಕಾರಣ ಸ್ಥಳೀಯರೆಲ್ಲ ಸೇರಿ ಮಗುವಿನ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸ್ವಲ್ಪ ದೂರದ ಪಾಳು ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಆರಂಭದಲ್ಲಿ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿತ್ತು. ಆದರೆ ಮಗುವಿನ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವನ್ನು ಬಾವಿಗೆಸೆದು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಮನೆಯಲ್ಲಿ ಪತಿ ಬಾಬು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಶಾರದಾಳನ್ನು ಬದಿಯಡ್ಕ ಠಾಣಾ ಪೊಲೀಸರು ವಿಚಾರಣೆ ನಡೆಸಿದಾಗ ತನೇ ಮಗುವನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಆರೋಪಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇದೀಗ ಆರೋಪಿಯನ್ನು ಕಾಸರಗೋಡು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.