ಆಲಪ್ಪುಳ: ಮಾಂಸ, ಮೀನು, ಮೊಟ್ಟೆ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಆಲಪ್ಪುಳ: ಕೇರಳದ ಆಲಪ್ಪುಳ ಹಾಗೂ ಕೋಟ್ಟಯಂ ಜಿಲ್ಲೆಗಳ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಈ ಕಾಯಿಲೆಯನ್ನು ‘ರಾಜ್ಯ ವಿಪತ್ತು’ ಎಂದು ಘೋಷಿಸಲಾಗಿದೆ. ರೋಗ ಕಾಣಿಸಿಕೊಂಡ ಪ್ರದೇಶದಿಂದ ಒಂದು ಕಿ.ಮೀ. ಸುತ್ತಲಿನ ಪ್ರದೇಶಗಳಲ್ಲಿ ಕೋಳಿ, ಬಾತುಕೋಳಿ ಹಾಗೂ ಇತರ ಪಕ್ಷಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭಿಸಲಾಗಿದೆ. ಸುಮಾರು 40,000ದಷ್ಟು ಹಕ್ಕಿಗಳನ್ನು ಈಗಾಗಲೇ ಕೊಲ್ಲಲಾಗಿದೆ.

ಆಲಪ್ಪುಳದಲ್ಲಿ ಮಾಂಸ, ಮೀನು ಹಾಗೂ ಮೊಟ್ಟೆಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ, ಕೇರಳದಿಂದ ಕೋಳಿ ಹಾಗೂ ಮೊಟ್ಟೆಗಳನ್ನು ತರುವುದಕ್ಕೆ ತಮಿಳುನಾಡು ನಿರ್ಬಂಧ ವಿಧಿಸಿದೆ. ಕೇರಳದಿಂದ ತಮಿಳುನಾಡಿಗೆ ಬರುವ ವಾಹನಗಳ ತಪಾಸಣೆ ನಡೆಸಲು ಗಡಿಯ 26 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ.

ವಲಸೆ ಹಕ್ಕಿಗಳ ಸಾವು:  ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತ ಮುತ್ತ 2,700ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಮೃತಪಟ್ಟಿವೆ. ಹಾಗಾಗಿ, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಹೆಬ್ಬಾತು, ಗಾವಿಲಾ ಸೇರಿದಂತೆ ವಿವಿಧ ಪ್ರಭೇದಕ್ಕೆ ಸೇರಿದ ಪಕ್ಷಿಗಳು ಮೃತಪಟ್ಟಿವೆ; ಇವು ವಿಷಾಹಾರ ಸೇವಿಸಿ ಸತ್ತಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕಾಂಗ್ರಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನದಿ ಪಾತ್ರದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಬಂದ್‌ ಮಾಡಲಾಗಿದೆ. ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಕಾಗೆಗಳ ಸಾವು: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಳೆದ ಸುಮಾರು ಎಂಟು ದಿನಗಳಲ್ಲಿ 155 ಕಾಗೆಗಳು ಹಕ್ಕಿಜ್ವರದಿಂದಾಗಿ ಮೃತಪಟ್ಟಿವೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಮೋದ್‌ ಶರ್ಮಾ ತಿಳಿಸಿದ್ದಾರೆ.

‘ಕಾಗೆಗಳನ್ನು ಬಿಟ್ಟರೆ ಬೇರೆ ಹಕ್ಕಿಗಳಲ್ಲಿ ಈ ರೋಗ ಕಾಣಿಸಲಿಲ್ಲ. ಈ ಭಾಗದ 120 ಕೋಳಿಗಳು ಮತ್ತು ಪ್ರವಾಸಿ ತಾಣವಾದ ಸಿರಪುರ ಸರೋವರದಲ್ಲಿ ಕಾಣಿಸಿರುವ 30 ವಲಸೆ ಹಕ್ಕಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ಅವರು ತಿಳಿಸಿದರು.

ದಕ್ಷಿಣ ಕನ್ನಡದಲ್ಲೂ ಆತಂಕ?

ಮುಡಿಪು: ಕೇರಳದ ಗಡಿಗೆ ಹೊಂದಿಕೊಂಡಿರುವ ಮಂಜನಾಡಿ‌ ಗ್ರಾಮದ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಒಂದೇ ಕಡೆ ಆರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದು ಮಂಗಳವಾರ‌ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಕ್ಕಿಜ್ವರದ ಆತಂಕ ಮೂಡಿಸಿದೆ. 

ಕೇರಳ ರಾಜ್ಯದ ಹಲವೆಡೆ ಹಕ್ಕಿಜ್ವರದ ಶಂಕೆ ಮೂಡಿರುವ ಬೆನ್ನಲ್ಲೇ, ಗಡಿ‌ ಪ್ರದೇಶದಲ್ಲಿ ಕಾಗೆಗಳು ಸತ್ತು ಬಿದ್ದಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಭೇಟಿ ನೀಡಿ ಪರಿಶೀಲಿಸಿದ್ದು,  ಪಶು ವೈದ್ಯಕೀಯ ಇಲಾಖೆ ಹಾಗೂ ಉಪ ವಿಭಾಗಾಧಿಕಾರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

‘ನಮಗೆ ಈಗಷ್ಟೇ ಮಾಹಿತಿ ಬಂದಿದ್ದು, ಪರಿಶೀಲಿಸಲಾಗುವುದು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಟಿ.ಜಿ. ಪ್ರಸನ್ನಕುಮಾರ್ ತಿಳಿಸಿದ್ದಾರೆ.

‘ಕಾಗೆಗಳ ಸಾವಿನ ಬಗ್ಗೆ ಇನ್ನಷ್ಟೇ ವರದಿಗಳು ಬರಬೇಕಾಗಿವೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಚೆಗೆ ಯಾವುದೇ ಎನ್‌1ಎಚ್‌‌1 ಸೋಂಕಿನ (ಹಕ್ಕಿಜ್ವರ) ಪ್ರಕರಣಗಳು ಪತ್ತೆಯಾಗಿಲ್ಲ. ಕೇರಳದಿಂದ ರಾಜ್ಯಕ್ಕೆ ಫಾರಂ ಕೋಳಿ ಪೂರೈಕೆ ಆಗುವುದಿಲ್ಲ. ಇಲ್ಲಿಂದಲೇ ಹೋಗುತ್ತದೆ. ಅಲ್ಲದೇ, ಈಚೆಗೆ ಬೇರೆಡೆ ವರದಿ ಆಗಿರುವುದು ಎನ್‌1ಎಚ್‌8 ಸೋಂಕು ಆಗಿದ್ದು, ಈ ಬಗ್ಗೆ ಅನಗತ್ಯ ಆತಂಕ ಬೇಡ’ ಎಂದು ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ದೃಢಪಡಿಸಿದ್ದಾರೆ.

ಸತ್ತು‌ಬಿದ್ದಿರುವ ಕೆಲವು ಕಾಗೆಗಳಲ್ಲಿ ಮೂರು‌ ಕೊಳೆತು ಹೋಗಿವೆ. ಈ ಪೈಕಿ ಒಂದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲಿ–ಹೆಗ್ಗಣಕ್ಕೆ ಇಟ್ಟ ವಿಷದಿಂದಾಗಿಯೂ ಸಾವನಪ್ಪಿರುವ ಸಂಭವ ಇದೆ.

Leave a Reply

Your email address will not be published. Required fields are marked *

error: Content is protected !!