ಬಾರ್ಕೂರು ಕಾಳಿಕಾಂಬಾ ದೇವಸ್ಥಾನ: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಬ್ರಹ್ಮಾವರ: ‘ದೇವಸ್ಥಾನಗಳು ಕೇವಲ ಗುತ್ತಿಗೆದಾರರಿಂದ ನಡೆಯುವ ನಿರ್ಮಾಣಗಳಲ್ಲ. ದೇಗುಲಗಳು ತಲೆತಲಾಂತರಗಳಿಂದ ಭಕ್ತರನ್ನು ಸೆಳೆಯುವ ಭಕ್ತಿಯ ಕೇಂದ್ರಗಳು’ ಎಂದು ಆನೆಗೊಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಬಾರ್ಕೂರು ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು. ‘ಕರಾವಳಿ ಕರ್ನಾಟಕದಲ್ಲಿ ಬಾರ್ಕೂರು ಕಾಳಿಕಾಂಬಾ ದೇವಸ್ಥಾನ ಕರ್ನಾಟಕ ಶಿಲ್ಪ ಶೈಲಿಯನ್ನು ಹೊಂದಿದ ಏಕೈಕ ದೇವಸ್ಥಾನವಾಗಿ ರೂಪುಗೊಳ್ಳುತ್ತಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಪರಂಪರಾಗತ ಶಿಲ್ಪಿಗಳ ಸ್ಥಪತಿಗಳ ಮಂಡಳಿ ಇದೆ. ಅದೇ ರೀತಿಯಲ್ಲಿ ಕರ್ನಾಟಕ ಸರ್ಕಾರ ಕೂಡಾ ಸ್ಥಪತಿಗಳ ಮಂಡಳಿ ರಚಿಸಿ, ಅವರಿಂದಲೇ ದೇವಸ್ಥಾನಗಳ ನಿರ್ಮಾಣ ಮಾಡಿಸಬೇಕು’ ಎಂದರು. ಫೆಬ್ರುವರಿ 11ರಿಂದ 19 ರವರೆಗೆ ನಡೆಯುವ ಬ್ರಹ್ಮಕಲಶೊತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರ ಹೊಬಳಿ, ಮೊಕ್ತೇಸರರಾದ ಪ್ರವೀಣ್ ಆಚಾರ್ಯ ರಂಗನಕೆರೆ, ರವಿ ಆಚಾರ್ಯ ಕೆಳಾರ್ಕಳಬೆಟ್ಟು, ದೇವಸ್ಥಾನದ ತಂತ್ರಿ ಲಕ್ಷ್ಮೀಕಾಂತ ಶರ್ಮ, ನವೀಕರಣ ಸಮಿತಿಯ ಕಾರ್ಯದರ್ಶಿ ಚೇಂಪಿ ಜನಾರ್ದನ ಆಚಾರ್ಯ, ಕೋಟ ಚಂದ್ರ ಆಚಾರ್ಯ ಇದ್ದರು. |