ಉಡುಪಿ: ರಮೇಶ್ ಕಲ್ಮಾಡಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಉಡುಪಿ: ಜಾನಪದ ಕಲಾ ಕ್ಷೇತ್ರದಲ್ಲಿ 3 ದಶಕಗಳಿಗೂ ಹೆಚ್ಚುಕಾಲ ತೊಡಗಿಸಿಕೊಂಡಿರುವ, ಕರಗ ಕೋಲಾಟ ಪ್ರಕಾರದಲ್ಲಿ ಪರಿಣತರಾಗಿರುವ ಮಲ್ಪೆಯ ಕಲ್ಮಾಡಿ ರಮೇಶ್ ಕಲ್ಮಾಡಿ ಅವರಿಗೆ 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ. ಕರಗ ಕೋಲಾಟ ಕಲೆಯನ್ನು ನಾಡಿನಾದ್ಯಂತ ಸಾವಿರಾರು ಯುವ ಕಲಾವಿದರಿಗೆ ಹಾಗೂ ನೂರಾರು ಸಂಘ ಸಂಸ್ಥೆಗಳ ಸದಸ್ಯರಿಗೆ ತರಬೇತಿ ನೀಡಿಸಜ್ಜುಗೊಳಿಸಿರುವ ರಮೇಶ್ ಕಲ್ಮಾಡಿ, ತುಳು ಹಾಗೂ ಕನ್ನಡ ಸಂಪ್ರದಾಯದ ಕುಣಿತಕ್ಕೆ ಬೇಕಾದ ವೇಷಭೂಷಣ ಹಾಗೂ ಪರಿಕರಗಳನ್ನು ಖುದ್ದು ತಯಾರಿಸಿರುವುದು ವಿಶೇಷ. ಧರ್ಮಸ್ಥಳದಲ್ಲಿ ನಡೆಯುವ ರಾಜ್ಯ ಮಟ್ಟದ ಭಜನಾ ಕಮ್ಮಟದಲ್ಲಿ ಕಳೆದ 23 ವರ್ಷಗಳಿಂದ ಸಂಪನ್ಮೂಲ ವ್ಯಕ್ತಿ, ಮೈಸೂರು ದಸರಾ, ಜನಪದ ಜಾತ್ರೆ, ಜನಪದ ಉತ್ಸವಗಳಲ್ಲಿ ಕರಗ ಕೋಲಾಟ ಕಲೆಯನ್ನು ಪ್ರದರ್ಶಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ನ ಸಕ್ರಿಯ ಸದಸ್ಯರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸ್ಪರ್ಧಾಳುವಾಗಿ, ತಂಡದ ನಿರ್ದೇಶಕ, ಸಂಘಟಕನಾಗಿಯೂ ದುಡಿದಿರುವ ರಮೇಶ್ ಕಲ್ಮಾಡಿ ಸದ್ಯ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಗಮ ಜಾನಪದ ಕಲಾಮೇಶವನ್ನು ಕಟ್ಟಿಕೊಂಡು ಕಳೆದ 25 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿರುವ ರಮೇಶ್ ಕಲ್ಮಾಡಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಹರಸಿ ಬಂದಿವೆ. |