ಉಡುಪಿ: ರಂಗಸ್ಥಳದಲ್ಲೇ ಯಕ್ಷಗಾನ ಪ್ರಧಾನ ವೇಷಧಾರಿ ಸಾವು

ಉಡುಪಿ : ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎನ್ನುವಲ್ಲಿ ಮಂಗಳವಾರ ಮುಂಜಾವ ಸಂಭವಿಸಿದೆ.

ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ‌ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದರು.

ಈ ಸಂದರ್ಭ ರಂಗಸ್ಥಳದಲ್ಲೇ ತೀವ್ರ ಅಸ್ವಸ್ಥಗೊಂಡರು, ತತ್‍ಕ್ಷಣ  ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು ಆಸ್ಪತ್ರೆ ತಲುಪುವಾಗ ಕೊನೆಯುಸಿರೆಳೆದಿದ್ದರೆ ಎಂದು ತಿಳಿದು ಬಂದಿದೆ

ಬಾರ್ಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿ ಅವರು ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದು, ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ತಿರುಗಾಟ ನಡೆಸಿದ್ದರು.

15ನೇ ವರ್ಷಕ್ಕೆ ಮೇಳ ಸೇರಿದ ಇವರು ಗೋಳಿಗರಡಿ, ಕಮಲಶಿಲೆ, ಅಮೃತೇಶ್ವರೀ, ಸಾಲಿಗ್ರಾಮ, ಸೌಕೂರು, ಹಾಲಾಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ವೈವಿಧ್ಯಮಯ ವೇಷಗಳನ್ನು ಮಾಡಿ ಕಲಾ ಸೇವೆ ಗೈದಿರುತ್ತಾರೆ. ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆಯನ್ನು ಇಂದು ಸಂಜೆ ಬಾರ್ಕೂರಿನ ಬಳಿ ಹೇರಾಡಿಯಲ್ಲಿ ನೆರೆವೇರಿಸಲಾಗುವುದು.

ಯಕ್ಷಗಾನ ಕಲಾರಂಗದಲ್ಲಿ ರೂ 1ಲಕ್ಷ ಜೀವನ ಆನಂದ ವಿಮಾ ಯೋಜನೆಯನ್ನು ಮಾಡಿಕೊಂಡಿದ್ದು, ಯಕ್ಷನಿಧಿಯ ಎಲ್ಲಾ ಯೋಜನೆಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡ ಸರಳ ಸಜ್ಜನಿಕೆಯ ಕಲಾವಿದರಾಗಿದ್ದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!