ಬೆಂಗಳೂರು: ವಿಶ್ವಾಪ್ರಿಯಾ ಫೈನಾನ್ಷಿಯಲ್ ನಿಂದ ಧೋಖಾ – 7 ಪಾಲುದಾರರು ಎಸ್ಕೇಪ್!
ಬೆಂಗಳೂರು: ಚೆನ್ನೈ ಮೂಲದ ವಿಶ್ವಾಪ್ರಿಯಾ ಫೈನಾನ್ಷಿಯಲ್ ಸರ್ವೀಸಸ್ ಕಂಪನಿ ವಿರುದ್ಧ ನಾಲ್ಕು ಹೂಡಿಕೆದಾರರು ಪ್ರತ್ಯೇಕ ದೂರುಗಳನ್ನು ಸಲ್ಲಿಸುವುದರೊಂದಿಗೆ ಹೊಸ ಹಣಕಾಸು ಹಗರಣ ಬೆಳಕಿಗೆ ಬಂದಿದೆ.
ಕಂಪನಿಯ 7 ಪಾಲುದಾರರು ಹೂಡಿಕೆದಾರರ ಹಣದೊಂದಿಗೆ ಪರಾರಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಮ್ಮ ಹಣ ವಾಪಸ್ ಪಡೆಯಲು ನಾವು ಕಾಯುತ್ತಿದ್ದೇವೆ, ಆದರೆ ನಮ್ಮ ಮನವಿಗೆ ಕಂಪನಿಯವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೂಡಿಕೆದಾರರು ಅಳಲು ತೋಡಿಕೊಂಡಿದ್ದಾರೆ.
ಗಿರಿನಗರ ಮತ್ತು ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಈವರೆಗೆ ನಾಲ್ಕು ಹೂಡಿಕೆದಾರರು ಒಟ್ಟು 1 ಕೋಟಿ ರೂ. ಹಣ ವಂಚನೆಯಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ದೂರು ನೀಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಯ ಅಧಿಕಾರಿಗಳಾದ ಸುಬ್ರಮಣಿಯನ್, ಆರ್ ನಾರಾಯಣ್, ರಾಜಾ ರತ್ನಂ, ರಾಘವನ್ ಮತ್ತು ಟಿಎಸ್ ಶ್ರೀಮತಿ ಹಾಗೂ ರಾಜೇಂದ್ರ ಕುಮಾರ್ ಮತ್ತು ಸದಾನಂದ ಪಿ ಎಂಬುವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಸಂಸ್ಥೆಯು ಹಲವಾರು ಜನರಿಂದ ಠೇವಣಿ ಸಂಗ್ರಹಿಸಿದೆ ಆದರೆ ನೀಡಿದ ಭರವಸೆಯಂತೆ ಬಡ್ಡಿ ಅಥವಾ ಅಸಲು ಮೊತ್ತವನ್ನು ಮರುಪಾವತಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕ ಇಟ್ಟಿದ್ದ ಠೇವಣಿ ಹಣಕ್ಕೆ ಬಡ್ಡಿ ನೀಡಿಲ್ಲ, ಸಂಗ್ರಹಿಸಿದ್ದ ಏಜೆಂಟ್ ಗಳ ಬಳಿ ವಿಚಾರಿಸಿದೆ, ಸುಬ್ರಮಣಿಯನ್ ಮತ್ತು ಇತರ ಆರೋಪಿಗಳು ಹಣವನ್ನು ವಂಚಿಸಿ ಪರಾರಿಯಾಗಿದ್ದಾರೆ ಎಂದು ದೂರಿದ್ದಾರೆ .