ನನ್ನ ಆರೋಗ್ಯ ಸ್ಥಿರವಾಗಿದೆ: ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್
ಬೆಂಗಳೂರು: ಹಠಾತ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು, ಆರೋಗ್ಯ ಸ್ಥಿರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ನನ್ನ ಆರೋಗ್ಯ ಸುಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮವಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಹಿಂದಿರುಗುವಾಗ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವಸ್ಥರಾಗಿದ್ದರು. ಬಳಿಕ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.