ಜ.8ರಿಂದ ಭಾರತ-ಬ್ರಿಟನ್ ವಿಮಾನಯಾನ ಪುನರಾರಂಭ: ಕೇಂದ್ರ ಸರ್ಕಾರ
ನವದೆಹಲಿ: ಹೊಸ ಸ್ವರೂಪದ ರೂಪಾಂತರಿ ಕೋವಿಡ್ ವೈರಾಣು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಭಾರತ-ಬ್ರಿಟನ್ ವಿಮಾನ ಸಂಚಾರ ಇದೇ ಜನವರಿ 8ರಿಂದ ಪುನಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಕೊರೊನಾ ವೈರಾಣುವಿನ ಹೊಸ ಸ್ವರೂಪವು ಬ್ರಿಟನ್ನಲ್ಲಿ ಪತ್ತೆಯಾದ ಬೆನ್ನಲ್ಲೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಭಾರತ ಹಾಗೂ ಬ್ರಿಟನ್ ನಡುವಣ ವಿಮಾನಯಾನ ಸೇವೆಯನ್ನು ಜನವರಿ 8ರಿಂದ ಪುನರಾರಂಭಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ‘ಭಾರತ ಹಾಗೂ ಬ್ರಿಟನ್ ವಿಮಾನಯಾನ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಜನವರಿ 8ರಿಂದ ಸೀಮಿತ ರೀತಿಯಲ್ಲಿ ಕಾರ್ಯಾಚರಣೆ ಪುನಾರಂಭಿಸಲಾಗುತ್ತದೆ. ಜನವರಿ 23ರ ವರೆಗೆ ಕಾರ್ಯಾಚರಣೆಯನ್ನು ವಾರಕ್ಕೆ 15 ವಿಮಾನಯಾನಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ನಿಷೇಧ ತೆರುವುಗೊಳಿಸುವುದರ ಭಾಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಿಂದ ಬ್ರಿಟನ್ಗೆ ವಿಮಾನಗಳು ಪ್ರಯಾಣ ಬೆಳೆಸಲಿವೆ ಎಂದು ತಿಳಿದುಬಂದಿದೆ.
ಕೊರೊನಾ ವೈರಾಣುವಿನ ಹೊಸ ಸ್ವರೂಪವು ಪತ್ತೆಯಾದ ಬೆನ್ನಲ್ಲೇ ಡಿಸೆಂಬರ್ 23ರಿಂದ ಬ್ರಿಟನ್ಗೆ ಹೋಗುವ ಹಾಗೂ ಬರುವ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಬಳಿಕ ತಾತ್ಕಾಲಿಕ ನಿಷೇಧವನ್ನು ಜನವರಿ 7ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಜನವರಿ 8ರಿಂದ ವಿಮಾನಯಾನ ಸೇವೆ ಪುನಾರಂಭವಾಗಲಿದೆ.