ನಾಳೆಯಿಂದ ಶಾಲೆಗಳು ಪುನರಾರಂಭ, ರೂಪಾಂತರಿ ವೈರಸ್’ನಿಂದ ಸಮಸ್ಯೆಯಿಲ್ಲ: ಸುರೇಶ್ ಕುಮಾರ್
ಬೆಂಗಳೂರು: ಜನವರಿ 1 ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗಿದು ನಿರ್ಣಾಯಕ ಸಮಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಶಾಲೆ, ಕಾಲೇಜುಗಳ ಆರಂಭಕ್ಕೆ ಇನ್ನೊಂದು ದಿನ ಮಾತ್ರವೇ ಬಾಕಿ ಇರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬೆಂಗಳೂರಿನ ವಿವಿಧ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿದ ಸುರೇಶ್ ಕುಮಾರ್ ಅವರು ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಶಾಲೆ, ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ. ಬ್ರಿಟನ್ ರೂಪಾಂತರಿ ವೈರಸ್’ನಿಂದ ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆಯೇ ಜ.1 ರಿಂದ ಎಸ್ಎಸ್ಎಲ್’ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ಚಟುವಟಿಕೆ ಮತ್ತು 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಕಳೆದ ಜುಲೈ 20ರಿಂದ ಚಂದನಾ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು 2021ರ ಜ.1ಕ್ಕೆ ಪೂರ್ಣಗೊಳ್ಳಲಿವೆ. ಜ.1 ರಿಂದ 10ನೇ ತರಗತಿಗೆ ಶಾಲಾ ತರಗತಿಗಳು ಮತ್ತು 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಆರಂಭವಾಗುತ್ತಿವೆ. ಇದರ ಜೊತೆಗೆ ಮಕ್ಕಳ ಕಲಿಕೆ ಹಿತದೃಷ್ಟಿಯಿಂದ ಚಂದನಾ ವಾಹಿನಿಯಲ್ಲಿ 8,9 ಮತ್ತು 10ನೇ ತರಗತಿಗಳಿಗೆ ಪ್ರಸಾರವಾಗುತ್ತಿದ್ದ ಪಾಠಗಳನ್ನು ಜ.4ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.