ಮುಂಬೈಗರಿಂದ ಕೊರೊನಾ ಹೆಚ್ಚಾಗುತ್ತಿದೆ: ವೀರೇಂದ್ರ ಹೆಗ್ಗಡೆಯವರಿಂದ ಸ್ಪಷ್ಟನೆ
ಧರ್ಮಸ್ಥಳ: ಖಾಸಗಿ ಸುದ್ದಿ ವಾಹಿನಿಯಲ್ಲಿ ದೇವಸ್ಥಾನಗಳನ್ನು ದೇವರ ದರ್ಶನಕ್ಕೆ ಮುಕ್ತಗೊಳಿಸುವ ವಿಚಾರದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರದ ಜನರ ಸಂಪರ್ಕದಿಂದ ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಹೆಗ್ಗಡೆ ಅವರ ಪರವಾಗಿ ವಾದಿಸುತ್ತಿದ್ದರೆ, ಮತ್ತೆ ಕೆಲವರು ವಿರುದ್ಧವಾಗಿ ವಾದಿಸುತ್ತಿದ್ದಾರೆ. ಈ ಹೇಳಿಕೆಗೆ ಧರ್ಮಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ದಿನ ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ಹಾಗೂ ದೂರವಾಣಿ ಮುಖಾಂತರ ಮಾತನಾಡಿದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಜನರು ಕರ್ನಾಟಕ ರಾಜ್ಯಕ್ಕೆ ಬಂದಿರುವುದರಿಂದ ಇಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ, ಅವರು ಅಲ್ಲೇ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಾನು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಇದರ ಹಿಂದೆ ಇರುವ ಉದ್ದೇಶವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಹೊರತು ದುರುದ್ದೇಶಕ್ಕೆ ಬಳಸಬಾರದು. ಕ್ಷೇತ್ರದ ಭಕ್ತಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮುಂಬೈ ನಗರದಲ್ಲಿ ಉತ್ತಮ ನೀತಿ, ನಡವಳಿಕೆ ಮತ್ತು ವ್ಯವಹಾರಗಳಿಂದ ಹೆಸರುವಾಸಿಯಾಗಿದ್ದು ನಮಗೆ ಕೀರ್ತಿ ತಂದಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತದಲ್ಲಿ ನಡೆಯುತ್ತಿರುವ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯನ್ನು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕ್ವಾರಂಟೈನ್‌ಗಾಗಿ ನೀಡಲಾಗಿದೆ. ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಮಾತ್ರವಲ್ಲದೆ ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿ ಗೃಹದ ಮುನ್ನೂರು ಕೊಠಡಿಯನ್ನು ಕೂಡಾ ಜಿಲ್ಲಾಡಳಿತಕ್ಕೆ ಕ್ವಾರಂಟೈನ್‌ಗಾಗಿ ನೀಡಲಾಗಿದೆ. ಆದ್ದರಿಂದ ಮುಂಬೈ ನಿವಾಸಿಗಳು ಮನಸ್ಸಿನಲ್ಲಿ ಯಾವುದೇ ಗೊಂದಲವನ್ನು ಇಟ್ಟುಕೊಳ್ಳದೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಕಡೆ ಜಾಗೃತರಾಗಿರಿ. ಈ ಮಹಾಮಾರಿಯಿಂದ ಮುಕ್ತರಾಗಲು ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಆರ್ಶಿವಾದವಿರಲಿ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |