ಅಬಕಾರಿ ರಕ್ಷಕರು ಇನ್ನು ಮುಂದೆ ಪೇದೆಗಳು – ಪದನಾಮ ಬದಲಿಸಿ ಸರ್ಕಾರದ ಆದೇಶ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅಬಕಾರಿ ರಕ್ಷಕ ಮತ್ತು ಅಬಕಾರಿ ಹಿರಿಯ ರಕ್ಷಕರ ಹುದ್ದೆಯ ಪದನಾಮಗಳನ್ನು ಬದಲಾಯಿಸಿ ಅಬಕಾರಿ ಪೇದೆ ಮತ್ತು ಅಬಕಾರಿ ಮುಖ್ಯ ಪೇದೆ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಳ ಹಂತದ ಸಿಬ್ಬಂದಿಗಳ ಕಾರ್ಯ ದಕ್ಷತೆ ಹೆಚ್ಚಿಸಲು ಅಬಕಾರಿ ರಕ್ಷಕ ಎಂಬ ಪದನಾಮದ ಬದಲು ಅಬಕಾರಿ ಪೇದೆ ಎಂದು ಬದಲಿಸುವಂತೆ ಬಹಳ ವರ್ಷಗಳ ಬೇಡಿಕೆ ಇತ್ತು. ಈ ಕುರಿತು ಇಲಾಖೆ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ  ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಅಬಕಾರಿ ಪೇದೆ ಎಂದು ಕರೆಯಲಾಗುತ್ತದೆ.

ಅಲ್ಲದೇ ಅಬಕಾರಿ ಇಲಾಖೆಯ ಸಿಬ್ಬಂದಿ ಪೊಲೀಸ್ ಇಲಾಖೆಯ ಮಾದರಿಯಲ್ಲಿ ಸಮವಸ್ತ್ರ ಧರಿಸಿ ಕಾರ್ಯ ನಿರ್ವಹಿಸುವುದರಿಂದ ಅವರನ್ನು ಅಬಕಾರಿ ಪೇದೆ ಹಾಗೂ ಅಬಕಾರಿ ಮುಖ್ಯ ಪೇದೆ ಎಂದು ಮರುನಾಮಕರಣ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ  ಪದನಾಮ ಬದಲಾವಣೆಯಿಂದ ಸಿಬ್ಬಂದಿ ಯಾವುದೇ ವಿಶೇಷ ಸೌಲಭ್ಯ ಕೋರುವಂತಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಅಬಕಾರಿ ರಕ್ಷಕರನ್ನು ಅಬಕಾರಿ ಕಾನ್‌ಸ್ಟೆಬಲ್ ಎಂದು ಕರೆಯಲಾಗುತ್ತಿದೆ. ಪೊಲೀಸ್ ಇಲಾಖೆ ಮಾದರಿಯಲ್ಲಿ ಕಾರ್ಯನಿರ್ವಹಣೆ ಸ್ವರೂಪ ಕೂಡ ಒಂದೇ ರೀತಿ ಇದೆ. ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ಬಳಸಲಾಗುತ್ತಿರುವ ಪದನಾಮಗಳ ಮಾದರಿಯಲ್ಲಿ ಅಬಕಾರಿ ರಕ್ಷಕರು ಹಾಗೂ ಅಬಕಾರಿ ಹಿರಿಯ ರಕ್ಷಕರ ಪದನಾಮವನ್ನು ಮರು ನಾಮಕಾರಣ ಮಾಡುವಂತೆ ರಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಬಕಾರಿ ರಕ್ಷಕರ ಪದನಾಮ ಬದಲಿಸಲು ಸಿಬ್ಬಂದಿ ಈ ಹಿಂದಿನ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಾನು ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಸಿಬ್ಬಂದಿಯ ಕಷ್ಟಗಳು ಚೆನ್ನಾಗಿ ಗೊತ್ತಿದೆ. ಹಾಗಾಗಿ, ಸಿಬ್ಬಂದಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಪದನಾಮವನ್ನು ಮರುನಾಮಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!