ಉಚ್ಚಿಲ: ಪಾಸಿಟಿವ್ ವ್ಯಕ್ತಿಗೆ 24 ಗಂಟೆ ಕಳೆದರೂ ಆಸ್ಪತ್ರೆಗೆ ದಾಖಲಿಸದ ಜಿಲ್ಲಾಡಳಿತ
ಪಡುಬಿದ್ರಿ: ಉಚ್ಚಿಲದಲ್ಲಿ ಕೋವಿಡ್ ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯದೆ, ಅವರು ವಾಸಿಸಿದ್ದ ಫ್ಲ್ಯಾಟ್ ಮಾತ್ರ ಸೀಲ್ ಡೌನ್ ಮಾಡಿದ ಅಧಿಕಾರಿಗಳ ಕ್ರಮದಿಂದ ಶನಿವಾರ ಗೊಂದಲ ವಾತಾವರಣ ನಿರ್ಮಾಣವಾಯಿತು.
ಉಚ್ಚಿಲ ಪೊಲ್ಯ ರಸ್ತೆಯ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಾಗಿದ್ದ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ 14 ದಿನ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಇವರ ಗಂಟಲ ದ್ರವದ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಪಾಸಿಟಿವ್ ಆಗಿತ್ತು. ಶುಕ್ರವಾರ ಅಪಾರ್ಟ್‌ಮೆಂಟ್ ಅನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ ವರೆಗೂ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ದಿರಲಿಲ್ಲ. ಇದರಿಂದ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯರ ವಿರೋಧ ತೀವ್ರಗೊಳ್ಳುತಿದ್ದಂತೆಯೇ ಶನಿವಾರ ಮಧ್ಯಾಹ್ನ ಆಂಬುಲೆನ್ಸ್ ಮೂಲಕ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
‘ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನನ್ನ ಗಂಡನಿಗೆ ಕೊರೊನಾ ಪಾಸಿಟಿವ್ ಇದೆ ಎಂದು ತಿಳಿಸಿದ ಅಧಿಕಾರಿಗಳು ಸಂಜೆ ಅಪಾರ್ಟ್‌ಮೆಂಟ್ ಸೀಲ್‌ಡೌನ್ ಮಾಡಿದ್ದಾರೆ. ಶನಿವಾರ ಮಧ್ಯಾಹ್ನವಾದರೂ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ನಮಗೆ ಆಹಾರ ಇಲ್ಲ ಎಂದು ನೆರೆಮನೆಯ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ನಮ್ಮ ಬಗ್ಗೆ ಗಮನ ಹರಿಸಿಲ್ಲ’ ಎಂದು ಅವರ ಪತ್ನಿ ದೂರಿದ್ದಾರೆ.
ತಾಲ್ಲೂಕು ಪಂಚಾಯಿತಿ ಸದಸ್ಯ ಶೇಖಬ್ಬ, ‘ನಿನ್ನೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಮನೆಯವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಿಲ್ಲ. ನಾವು ಬೆಳಿಗ್ಗಿನ ಉಪಾಹಾರ ಹಾಗೂ ದಿನಸಿ ಸಾಮಾಗ್ರಿ ನೀಡಿದ್ದೇವೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವೈದ್ಯಾಧಿಕಾರಿ ಭೇಟಿ: ಪಾಸಿಟಿವ್ ಬಂದಿದ್ದ ವ್ಯಕ್ತಿ ಮನೆಯಲ್ಲೇ ಉಳಿದಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಜನ ಪ್ರತಿನಿಧಿಗಳು, ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಬಂದಿದ್ದರು. ವ್ಯಕ್ತಿ ಮತ್ತು ಅವರ ಪತ್ನಿ ಕಿಟಕಿ ಮೂಲಕ ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು.
ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ, ‘ಸರ್ಕಾರದ ವೈಫಲ್ಯದಿಂದ ಗೊಂದಲ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಕೇಸರಿ ಯು. ‘ಇದು ಸರ್ಕಾರದ ವೈಫಲ್ಯ ಅಲ್ಲ. ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕೀಯ ಮಾಡುತ್ತಿವೆ’ ಎಂದು ಹೇಳಿದ್ದಾರೆ.