ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆನ್ ಲೈನ್ ಚುನಾವಣೆ?
ಬೆಂಗಳೂರು: ಕೊರೋನಾ ವೈರಸ್ ಸೋಂಕಿನ ಕಾರಣ ಕೆಪಿಸಿಸಿ ಯುವ ಘಟಕದ ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳ ಚುನಾವಣೆಯನ್ನು ಆನ್ ಲೈನ್ ನಲ್ಲಿ ನಡೆಸುವ ಚಿಂತನೆ ಹೈಕಮಾಂಡ್ ನಲ್ಲಿದೆ . ಜನವರಿ ಎರಡನೇ ವಾರ ಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಮಾರ್ಚ್ 2020ರಿಂದಲೂ ಈ ಹುದ್ದೆ ಖಾಲಿಯಿದೆ. ಒಂಬತ್ತು ತಿಂಗಳ ನಂತರ, ಈ ಹುದ್ದೆಗೆ ಚುನಾವಣೆ ನಡೆಸಬೇಕೆ ಅಥವಾ ಯುವ ವಿಭಾಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕೆ ಎಂಬ ಸಂದಿಗ್ಧ ಸ್ಥಿತಿಯಲ್ಲಿದೆ ಎಐಸಿಸಿ ಇದೆ.
ಪ್ರಸ್ತುತ, ರಾಜ್ಯದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು 6.5 ಲಕ್ಷ ಮತದಾರರು ಅರ್ಹರಿದ್ದಾರೆ. ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಹೆಚ್. ಎಸ್. ಮಂಜುನಾಥ್, ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಳಪಾಡ್, ಮಾಜಿ ಸಚಿವ ಎಂಆರ್ ಸೀತಾರಾಮ್ ಅವರ ಪುತ್ರ ರಕ್ಷ ರಾಮಯ್ಯ, ಮಂಗಳೂರಿನ ಮಿಥುನ್ ರೈ ಮತ್ತಿತರರು ಆಕಾಂಕ್ಷಿಗಳಿದ್ದಾರೆ.
ಆಕಾಂಕ್ಷಿಗಳನ್ನು ನವದೆಹಲಿಗೆ ಸಂದರ್ಶನಕ್ಕಾಗಿ ಕರೆಯಲಾಗಿದೆ. ಅಲ್ಲಿ ಎಐಸಿಸಿ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರನ್ನೊಳಗೊಂಡ ಸಮಿತಿ ಎದುರು ಸಂದರ್ಶವನ್ನು ಎದುರಿಸಬೇಕಾಗಲಿದೆ. ಕೆಲವರು ಕೆಪಿಸಿಸಿ ಯುವ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲು ಬಯಸಿದರೆ ರಾಹುಲ್ ಗಾಂಧಿ ಚುನಾವಣೆ ನಡೆಸಲು ಒಲವು ತೋರಿದ್ದಾರೆ.