ಕರಾವಳಿ ಪ್ರಾ. ಅಧ್ಯಕ್ಷರಿಂದ ಪಿಲಿಕುಳ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡ ಕಾಮಗಾರಿಗಳನ್ನು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶನಿವಾರ ಪರಿಶೀಲಿಸಿದರು.
ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಸೌಕರ್ಯಕ್ಕಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಖರೀದಿಸಿದ ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ವಿವರಣೆಯನ್ನು ಕಾರ್ಯನಿರ್ವಾಹಕ ನಿರ್ದೇಶಕಿ ಮೇಘನಾ ಆರ್. ನೀಡಿದರು.
ಅಲ್ಲದೇ ನಿಸರ್ಗಧಾಮದಲ್ಲಿ ಇನ್ನೂ ಆಗಬೇಕಾದ ಕಾಮಗಾರಿಗಳ ಪಟ್ಟಿಯನ್ನು ನೀಡಿ ಅನುದಾನ ಮಂಜೂರು ಮಾಡಲು ಕೋರಿದರು. ಇದಕ್ಕೆ ಸ್ಪಂದಿಸಿದ ರತ್ನಾಕರ ಹೆಗ್ಡೆ, ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳನ್ನು ನಡೆಸುವ ಬಗ್ಗೆ ಸಮ್ಮತಿ ಸೂಚಿಸಿದರು.
ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಯು.ಪಿ ಇಬ್ರಾಹಿಂ, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಡಿಸೋಜ ಇದ್ದರು.