ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಲವರಿಗೆ ಲಕ್ಷಾಂತರ ರೂ. ವಂಚನೆ

ಮಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಬಂಧಿತ ಆರೋಪಿ. ಈತ 20 ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ ಅದರ ಮೂಲಕ ಜನರನ್ನು ಸಂಪರ್ಕಿಸಿ ಮದುವೆ ಸಂಬಂಧ, ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ನಂಬಿಸಿ 20 ಲಕ್ಷಕ್ಕೂ ಅಧಿಕ ರೂ. ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂದು ನಂಬಿಸುತ್ತಿದ್ದ ಪರಮೇಶ್ವರಪ್ಪ,  ಗೋವಾದ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬವರ ಪುತ್ರಿಗೆ ವಾಟ್ಸ್ಯಾಪ್‌ನಲ್ಲಿ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿರುವ ಬಗ್ಗೆ ಮಾಹಿತಿ ಕಳುಹಿಸಿದ್ದ. ತನ್ನ ಮಗಳಿಗೆ ನೆಂಟಸ್ಥಿಕೆ ಬಂದ ಹಿನ್ನೆಲೆಯಲ್ಲಿ ಹನುಮಪ್ಪ ಅವರು ಮಂಗಳೂರಿನ ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಆತ ವಂಚಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 

ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಡಿ.2ರಂದು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ವೇಳೆ  ಆರೋಪಿಯು ಇಲ್ಲಿಯವರೆಗೆ 13 ಮಂದಿಗೆ 15ರಿಂದ 20 ಲಕ್ಷ ರೂ. ವಂಚಿಸಿರುವುದು ತಿಳಿದು ಬಂದಿದೆ.  ಇದರೊಂದಿಗೆ,  ಡಿ.20ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸರಿಗೆ ಮಹಿಳೆಯ ಹೆಸರಿನ ನಕಲಿ ಖಾತೆ ಮೂಲಕ ಪರಿಚಯವಾಗಿ  ಅಂಚೆ ಇಲಾಖೆಯಲ್ಲಿನ ಗ್ರೇಡ್‌-1, ಗ್ರೇಡ್‌-2 ಹುದ್ದೆ ಖಾಲಿ ಇರುವುದಾಗಿ ತಿಳಿಸಿ 6 ಲಕ್ಷ ರೂ. ಪಡೆದು ವಂಚಿಸಿದ್ದ.

ಈ ಎರಡೂ ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಸೈಬರ್‌ ಕ್ರೈಂ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ನಗರದ ಕೆಎಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಲ್ಲಿಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತ ಆರೋಪಿಯಿಂದ ಲ್ಯಾಪ್‌ಟಾಪ್‌, 5 ಮೊಬೈಲ್‌, ಅಂಚೆ ಇಲಾಖೆಯ ನಕಲಿ ಗುರುತಿನ ಚೀಟಿ, ಐಸಿಐಸಿಐ ಬ್ಯಾಂಕ್‌ನ ಡೆಬಿಟ್‌ ಕಾರ್ಡ್‌ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ವಾಧೀನಪಡಿಸಿಕೊಂಡಿರುವ  ವಸ್ತುಗಳ ಒಟ್ಟು ಮೌಲ್ಯ 1.35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 

ಸದ್ಯ ಆರೋಪಿಯನ್ನು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,‌ ಕೋವಿಡ್‌ ಪರೀಕ್ಷೆ ಹಿನ್ನೆಲೆಯಲ್ಲಿ ಆರೋಪಿ  ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!