ರೋಗಿಗಳಿಂದ 3.5ಲಕ್ಷ ರೂ. ವಸೂಲಿ: ಸುಳ್ಳು ಸುದ್ಧಿ ಹಬ್ಬಿಸಿದ ಯುವಕನ ಬಂಧನ
ಶಂಕರನಾರಾಯಣ: ಕೋವಿಡ್ -19 ರೋಗಿಗಳಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಲಕ್ಷಾಂತರ ರೂ. ಹಣ ಪಡೆದುಕೊಳ್ಳುತ್ತಿದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದಡಿ ಯುವಕನೋರ್ವನನ್ನು ಶಂಕರನಾರಾಯಣ ಪೊಲೀಸರು ಇಂದು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದೆ ಬೆಂಗಳೂರಿನಿಂದ ಬಂದ ಕಮಲಶಿಲೆಯ ಸುರೇಶ್ ಕುಲಾಲ್ (27) ಬಂಧಿತ ಆರೋಪಿ. ‘ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್ 19 ರೋಗಿಗಳಿಗೆ ಸಂಬಂಧಿಸಿ 3.5ಲಕ್ಷ ರೂ. ಹಣ ಪಡೆದುಕೊಳ್ಳುತ್ತಿದೆ. ಆದರೆ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ ಎಂಬ ಸಂದೇಶವನ್ನು ಈತ ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ವೈರಲ್ ಮಾಡಿರುವುದಾಗಿ ವಂಡ್ಸೆಕಂದಾಯ ನಿರೀಕ್ಷಕ ರಾಘವೇಂದ್ರ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲವೊಂದು ವಾಟ್ಸ್ ಆಪ್ ಗಳಲ್ಲಿ ಬಂದ ಮಾಹಿತಿ ಆಧಾರದಲ್ಲಿ ತಾನು ಈ ರೀತಿ ಸುಳ್ಳು ಮಾಹಿತಿ ಹರಡಿಸಿರುವುದಾಗಿ ಒಪ್ಪಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. |