ರಕ್ತದೊತ್ತಡದಲ್ಲಿ ತೀವ್ರ ಏರುಪೇರು: ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲು
ಹೈದರಾಬಾದ್: ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಅವರು ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕಳೆದ 10 ದಿನಗಳಿಂದ ಚಿತ್ರವೊಂದರ ಶೂಟಿಂಗ್ಗಾಗಿ ಹೈದರಾಬಾದ್ನಲ್ಲಿ ಉಳಿದುಕೊಂಡಿದ್ದರು. ಶೂಟಿಂಗ್ ಸೆಟ್ನಲ್ಲಿದ್ದ ಕೆಲವರಿಗೆ ಕೋವಿಡ್ ಇರುವುದು ಪತ್ತೆಯಾಗಿತ್ತು. ಡಿಸೆಂಬರ್ 22ರಂದು ರಜನಿಕಾಂತ್ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಆದರೆ, ಅವರಲ್ಲಿ ಕೋವಿಡ್ ಇರುವುದು ಪತ್ತೆಯಾಗಿರಲಿಲ್ಲ ಎಂದು ಅಪೋಲೋ ಆಸ್ಪತ್ರೆ ತಿಳಿಸಿದೆ.
‘ಕೋವಿಡ್ನ ಯಾವುದೇ ಲಕ್ಷಣಗಳು ಅವರಲ್ಲಿ ಕಂಡಬಂದಿಲ್ಲ. ಆದರೆ, ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡದಲ್ಲಿ ಏರುಪೇರು ಕಾಣಿಸಿಕೊಂಡದ್ದನ್ನು ಹೊರತುಪಡಿಸಿದರೆ, ಅವರಿಗೆ ಬೇರೆ ಯಾವುದೇ ಖಾಯಿಲೆಯ ಲಕ್ಷಣಗಳಿಲ್ಲ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ’ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ರಜನಿಕಾಂತ್ ಅಭಿನಯದ ‘ಅಣ್ಣಾತೆ’ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿತ್ತು. ಸಿನಿಮಾ ಸೆಟ್ನಲ್ಲಿ 4 ಮಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬುಧವಾರ ಶೂಟಿಂಗ್ ಅನ್ನು ನಿಲ್ಲಿಸಲಾಗಿತ್ತು. ಈ ವಿಷಯವನ್ನು ಅಣ್ಣಾತೆ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.