ಇಂಗ್ಲೆಂಡ್ ನಿಂದ ವಂದೇ ಭಾರತ್ ವಿಮಾನ ಸಂಚಾರ ತಾತ್ಕಾಲಿಕ ರದ್ದು
ನವದೆಹಲಿ: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು ಕಾಣಿಸಿಕೊಂಡ ಆತಂಕದ ಹಿನ್ನೆಲೆಯಲ್ಲಿ ಭಾರತ ಇಂಗ್ಲೆಂಡ್ ನಿಂದ ವಂದೇ ಭಾರತ್ ವಿಮಾನಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸ್ಪಷ್ಟಪಡಿಸಿದೆ.
ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ಮಾತನಾಡಿ, ಭಾರತದ ವಂದೇ ಭಾರತ್ ಮಿಷನ್ʼನ ಫೇಸ್ 8 ಪ್ಲಸ್ ಅಡಿಯಲ್ಲಿ 1,005 ಅಂತಾರಾಷ್ಟ್ರೀಯ ವಿಮಾನಗಳನ್ನ ಕಾರ್ಯಾಚರಣೆಗೊಳಿಸಲಾಗಿದ್ದು, 27 ದೇಶಗಳಿಂದ ಈ ವರೆಗೆ 40 ಲಕ್ಷಕ್ಕೂ ಹೆಚ್ಚು ಜನರನ್ನ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಈ ಮಿಷನ್ʼನ 8ನೇ ಪ್ಲಸ್ ಡಿಸೆಂಬರ್ 1ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಈ ಹಂತದಲ್ಲಿ 27 ದೇಶಗಳಿಂದ 1,005 ಅಂತಾರಾಷ್ಟ್ರೀಯ ವಿಮಾನಗಳನ್ನ ಓಡಿಸಲಾಗಿದೆ. ಡಿಸೆಂಬರ್ 22ರವರೆಗೆ ವಂದೇ ಭಾರತ್ ಮಿಷನ್ ಯೋಜನೆಯಡಿ 40 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.