ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲಿ- ಡಾ.ನವೀನ್ ಭಟ್

ಉಡುಪಿ, ಡಿ. 24: ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಉದ್ದಿಮೆದಾರರು, ರೈತರು
ಸೇರಿದಂತೆ ಎಲ್ಲಾ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ನೀಡುವುದರ ಮೂಲಕ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಠೇವಣಿ ಮತ್ತು ಸಾಲ ನೀಡುವ ಪ್ರಮಾಣದಲ್ಲಿನ ಅನುಪಾತವನ್ನು ಹೆಚ್ಚಳ ಮಾಡುವಂತೆ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಠೇವಣಿ ಸಂಗ್ರಹವಾಗುತ್ತಿದ್ದು, ಸಾಲ ನೀಡುವಿಕೆ ಪ್ರಮಾಣ ಕಡಿಮೆ. ರಿಜರ್ವ್ ಬ್ಯಾಂಕ್ ಪ್ರಕಾರ ಠೇವಣಿಯ 60% ಸಾಲ ನೀಡಬೇಕಿದ್ದು, ಜಿಲ್ಲೆಯಲ್ಲಿ ಈ ಪ್ರಮಾಣ 45% ಇದೆ. ಆದ್ದರಿಂದ ಎಲ್ಲಾ ಬ್ಯಾಂಕುಗಳು ವಿವಿಧ ಯೋಜನೆಯಡಿ ಸ್ವೀಕರಿಸುವ ಸಾಲದ ಅರ್ಜಿಗಳನ್ನು ವಿಳಂಬ ಮಾಡದೇ ಪರಿಶೀಲಿಸಿ, ದಾಖಲೆಗಳು ಸರಿಯಿದ್ದಲ್ಲಿ ಕೂಡಲೇ ಸಾಲ ವಿತರಿಸುವಂತೆ ಸೂಚನೆ ನೀಡಿದ ಡಾ.ನವೀನ್ ಭಟ್, ಗೃಹ ಸಾಲ ಕುರಿತು ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಮಂಜೂರು ಮಾಡುವಂತೆ ತಿಳಿಸಿದರು.

ವಿದ್ಯಾಭ್ಯಾಸ ಸಾಲ ಪಡೆಯಲು ರೂಪಿಸಿರುವ ವಿದ್ಯಾಲಕ್ಷಿö್ಮ ಪೋರ್ಟಲ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಎಲ್ಲಾ ಬ್ಯಾಂಕ್‌ಗಳು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಬರುವ ಆನ್‌ಲೈನ್ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ. ನಿರುದ್ಯೋಗಿ ಯುವ ಜನತೆಗೆ ಪಶುಪಾಲನೆ ಇಲಾಖೆಯಿಂದ ಆಯೋಜಿಸುತ್ತಿರುವ ಪಂಜರ ಕೋಳಿ ಸಾಕಾಣಿಕೆಗೆ ನೀಡುವ ಸಾಲದ ಕುರಿತು ಹೆಚ್ಚಿನ ಅರಿವು ಮೂಡಿಸಿ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸ್ಟ್ರೀಟ್ ವೆಂಡರ್ ಗಳಿಂದ ಸ್ವೀಕರಿಸಿರುವ ಅರ್ಜಿಗಳನ್ನು ಶೀಘ್ರದಲ್ಲಿ ಮಂಜೂರು ಮಾಡುವಂತೆ ತಿಳಿಸಿದರು.

ಕೆನರಾ ಬ್ಯಾಂಕ್‌ನ ಸಹಾಯಕ ಮುಖ್ಯ ಪ್ರಬಂಧಕ ಎಂ.ವೈ.ಹರೀಶ್ ಮಾತನಾಡಿ, ಜಿಲ್ಲೆಯ ಬ್ಯಾಂಕ್‌ಗಳು ಪ್ರಸ್ತಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ, 27560 ಕೋಟಿ ರೂ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.82 ರಷ್ಟು ಬೆಳವಣಿಗೆ ಆಗಿದೆ. 12418 ಕೋಟಿ ರೂ ಮುಂಗಡ ನೀಡಿದ್ದು, ಶೇ.4.23 ರಷ್ಡು ಪ್ರಗತಿ ಆಗಿದ್ದು, ಸಿಡಿ ಅನುಪಾತ ಶೇ.45.05 ಇದೆ. 3021 ಕೋಟಿ ಸಾಲ ನೀಡುವ ಮೂಲಕ 79% ಪ್ರಗತಿ ಸಾಧಿಸಿದೆ. 1587 ಕೋಟಿ ರೂ. ಗಳನ್ನು ಕೃಷಿ ಕ್ಷೇತ್ರಕ್ಕೆ, 1017 ಕೋಟಿ ರೂ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ, 14 ಕೋಟಿ ರೂ ವಿದ್ಯಾಭ್ಯಾಸ ಸಾಲವನ್ನು 310 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 145 ಕೋಟಿ ರೂ ಗೃಹ ಸಾಲ ನೀಡಿದ್ದು, ಆದ್ಯತಾ ವಲಯಗಳಿಗೆ 2804 ಕೋಟಿ ಮತ್ತು ಆದ್ಯೇತರ ವಲಯಕ್ಕೆ 217 ಕೋಟಿ ರೂ ಸಾಲ ವಿತರಿಸಲಾಗಿದೆ ಎಂದರು.
ನಬಾರ್ಡ್ನ ಎಜಿಎಂ ಸಂಗೀತಾ ಕರ್ಟಾ ಮಾತನಾಡಿ, ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಹೆಚ್ಚಿನ ಗಮನ ನೀಡುವುದರ ಮೂಲಕ ನಿಗಧಿತ ಗುರಿ ಸಾಧಿಸಬೇಕು, ಈ ಬಗ್ಗೆ ಡಿಸ್ಟಿçಕ್ಟ್ ಕ್ರೆಡಿಟ್ ಪ್ಲಾನ್ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ರೆಡಿಟ್ ಪ್ಲಾನ್ ಪುಸ್ತಕವನ್ನು ಸಿಇಓ ಡಾ.ನವೀನ್ ಭಟ್ ಬಿಡುಗಡೆ ಮಾಡಿದರು. ಲೀಡ್ ಬ್ಯಾಂಕ್ ಪ್ರಬಂಧಕ ರುದ್ರೇಶ್ ಹಾಗೂ ವಿವಿಧ ಇಲಾಖೆಗಳ ಮತ್ತು ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!