ಮತ್ತೆ ಕೊರೋನಾಘಾತ: ಸ್ಪೇನ್ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ
ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಭಾರತ ತತ್ತರಿಸಿ ಹೋಗಿದ್ದು, ಕೊರೋನಾ ವೈರಸ್ ಹೊಡೆತಕ್ಕೊಳಗಾದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಇದೀಗ ಭಾರತ ಸ್ಪೇನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಕೊರೋನಾ ವೈರಸ್ ದತ್ತಾಂಶಗಳ ಅನ್ವಯ ಭಾರತದಲ್ಲಿ ಒಂದೇ ದಿನ ಬರೋಬ್ಬರಿ 9,887 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.44 ಲಕ್ಷಕ್ಕೆ ಏರಿಕೆಯಾಗಿದೆ. ಆ ಮೂಲಕ ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಭಾರತ ಸ್ಪೇನ್ ದೇಶವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿದಿದೆ.
ಸ್ಪೇನ್ ನಲ್ಲಿ 2,40,978 ಸೋಂಕಿಕರಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ ಇದೀಗ 2,44,000 ಕ್ಕೆ ಏರಿಕೆಯಾಗಿದೆ. ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.
ಇನ್ನು ಭಾರತದಲ್ಲಿ ಸೋಂಕಿತರ ಗುಣಮುಖ ಪ್ರಮಾಣದಲ್ಲಿ ಅತ್ಯಲ್ಪ ಕುಸಿತ ಕಂಡುಬಂದಿದ್ದು, ಭಾರತದಲ್ಲಿ ಶೇ.48.27ರಷ್ಚು ಗುಣಮುಖ ಪ್ರಮಾಣ ಇತ್ತು. ಆದರೆ ಈಗ ಈ ಪ್ರಮಾಣ ಶೇ. 48.20ಕ್ಕೆ ಕುಸಿದಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 294 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 6,642ಕ್ಕೆ ಏರಿಕೆಯಾಗಿದೆ. ಅಂತಂಯೇ 2,36,657 ಮಂದಿ ಸೋಂಕಿತರ ಪೈಕಿ ಈವರೆಗೆ 1,14, 073 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 115942 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.