ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರನ್ನು ಉಗ್ರರಂತೆ ಬಿಂಬಿಸುತ್ತಾರೆ: ರಾಹುಲ್ ಗಾಂಧಿ

ನವದೆಹಲಿ: ನಿಷೇಧಾಜ್ಞೆ ಉಲ್ಲಂಘನೆ ಆರೋಪದ ಮೇಲೆ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ಗುರುವಾರ ನಡೆದಿದೆ.

ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಕಳೆದ 27 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳಿಗೆ ಮಧ್ಯೆ ಪ್ರವೇಶಿಸಿ ಎಂದು ಕೋರಲು ಸುಮಾರು 2 ಕೋಟಿ ಸಹಿಯನ್ನು ಹೊಂದಿರುವ ಮನವಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲು ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ಕೆ ಸಿ ವೇಣುಗೋಪಾಲ್, ರಂದೀಪ್ ಸುರ್ಜೆವಾಲಾ ಮೊದಲಾದವರು ವಿಜಯ್ ಚೌಕದಿಂದ ರಾಷ್ಟ್ರಪತಿ ಭವನಕ್ಕೆ ಹೊರಟಿದ್ದರು.

ಆದರೆ ಮೆರವಣಿಗೆಗೆ ಕಾಂಗ್ರೆಸ್ ನಾಯಕರಿಗೆ ಅನುಮತಿ ನೀಡಲಿಲ್ಲ, ಹೀಗಾಗಿ ರಾಷ್ಟ್ರಪತಿ ಭವನಕ್ಕೆ ಹೋಗಲು ಬಿಡುವುದಿಲ್ಲ, ಮೂವರು ನಾಯಕರು ಮಾತ್ರ ರಾಷ್ಟ್ರಪತಿ ಭೇಟಿಗೆ ಅನುಮತಿ ಪಡೆದಿದ್ದು, ಅವರು ಹೋಗಬಹುದು ಎಂದು ಪೊಲೀಸರು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನಕ್ಕೆ ಹೋಗಲು ಯತ್ನಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ ಸಿ ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೆವಾಲಾ ಮೊದಲಾದವರನ್ನು ಪೊಲೀಸರು ತಡೆದು ಬಂಧಿಸಿದರು. ಅವರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದ ಪ್ರಿಯಾಂಕಾ ಗಾಂಧಿ ವಾದ್ರಾ, ರೈತರನ್ನು ಸರ್ಕಾರ ಗೌರವದಿಂದ ಕಾಣಬೇಕು, ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ದೇಶ ವಿರೋಧಿಗಳಂತೆ ಬಿಂಬಿಸುತ್ತಿದೆ. ಸರ್ಕಾರ ರೈತರ ಜೊತೆ ಕ್ರೂರವಾಗಿ ವರ್ತಿಸುತ್ತಿದ್ದು,ತನ್ನ ಸ್ವಹಿತಾಸಕ್ತಿಯ ರಾಜಕೀಯ ಮಾಡುತ್ತಿದ್ದು ರೈತರು ಮತ್ತು ಜವಾನರಿಗೆ ಗೌರವವನ್ನೇ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಅನುಮತಿ ಪಡೆದುಕೊಂಡಿದ್ದ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಅಧಿರ್ ರಂಜನ್ ಚೌಧರಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು. 

ಪ್ರಧಾನಿ ಬಂಡವಾಳಶಾಹಿಗಳ ಪರ: ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹೊರಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವವರೆಗೆ ಪ್ರತಿಭಟನಾ ನಿರತ ರೈತರು ಮನೆಗಳಿಗೆ ಹಿಂತಿರುಗುವುದಿಲ್ಲ. ಸರ್ಕಾರ ಸಂಸತ್ತಿನ ಜಂಟಿ ಅಧಿವೇಶನ ನಡೆಸಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು. ಸದನದಲ್ಲಿ ಕಾಯ್ದೆ ಬಗ್ಗೆ ಚರ್ಚೆ ನಡೆಸದೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ತರಲಾಗಿದೆ, ಇದನ್ನು ಹಿಂತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ರೈತರು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಈ ದೇಶದ ಬಂಡವಾಳಶಾಹಿಗಳ ಪರವಾಗಿದ್ದಾರೆ. ಅವರನ್ನು ವಿರೋಧಿಸುವವರನ್ನು ಭಯೋತ್ಪಾದಕರಂತೆ, ದೇಶವಿರೋಧಿಗಳಂತೆ ಕಾಣುತ್ತಾರೆ, ಅದು ರೈತರಾಗಲಿ, ಕಾರ್ಮಿಕರಾಗಲಿ ಅಥವಾ ಮೋಹನ್ ಭಾಗವತ್ ಆಗಲಿ, ಎಲ್ಲರೂ ದೇಶವಿರೋಧಿಗಳು ಎಂದು ಬಿಂಬಿಸುತ್ತಾರೆ, ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ, ಅದು ನಿಮ್ಮ ಕಲ್ಪನೆಯಷ್ಟೆ, ವಾಸ್ತವವಾಗಿ ಇಲ್ಲ ಎಂದು ದೂರಿದರು. 

ನಮ್ಮ ಗಡಿಭಾಗದಲ್ಲಿ ಇನ್ನೂ ಚೀನಾ ತನ್ನ ಸೇನೆಯನ್ನು ನಿಲುಗಡೆ ಮಾಡಿದೆ, ಹಿಂದೆ ಸರಿದಿಲ್ಲ, ಸಾವಿರಾರು ಕಿಲೋ ಮೀಟರ್ ಗಳಷ್ಟು ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ. ಆ ಬಗ್ಗೆ ಪ್ರಧಾನಿ ಏಕೆ ಮಾತನಾಡುತ್ತಿಲ್ಲ, ಮೌನಕ್ಕೆ ಶರಣಾಗಿರುವುದು ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು, ನಾಯಕರನ್ನು ಬಂಧಿಸಿದ ದೆಹಲಿ ಪೊಲೀಸರ ಕ್ರಮವನ್ನು ಖಂಡಿಸುತ್ತೇನೆ.ರೈತರ ಮತ್ತು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ನೋಡುತ್ತಿದೆ ಎಂದು ಆಪಾದಿಸಿದರು.

ಇಂದು ಯಾರೆಲ್ಲಾ ಪ್ರತಿಭಟನಾ ನಿರತ ರೈತರ ಪರವಾಗಿ ನಿಂತಿದ್ದಾರೆಯೋ ಅವರನ್ನು ಹತ್ತಿಕ್ಕಲು ನೋಡುತ್ತಿರುವ ಸರ್ಕಾರದ ಕ್ರಮ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೊಟ್ ಸಹ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!